Advertisement

ಸಹಕಾರ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ : ಎಚ್.ಕೆ. ಪಾಟೀಲ್

07:33 PM Aug 21, 2021 | Team Udayavani |

ಹೊಸಪೇಟೆ: ಸದ್ಯ ಸಹಕಾರ ಕ್ಷೇತ್ರವನ್ನು ಅಶಕ್ತಗೊಳಿಸುವ ಕಾರ್ಯ ನಡೆಯುತಿದ್ದು, ಈ ಕ್ಷೇತ್ರ ಗಂಡಾಂತರದಲ್ಲಿದೆ. ಸಹಕಾರ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದ್ದು, ಸಹಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

Advertisement

ನಗರದ ಮಲ್ಲಿಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಸ್ಥಳೀಯ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ನ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರ ಬ್ಯಾಂಕುಗಳಲ್ಲಿ ಸರಕಾರಿ ಸಂಸ್ಥೆಗಳು ಠೇವಣಿ ಇಡಬಾರದು ಎಂದು ಸುತ್ತೋಲೆ ಹೊರಡಿಸಿ ನಿರ್ದೇಶನ ನೀಡಲಾಗುತ್ತಿದೆ. ಆದರೂ ಸಹಕಾರ ಬ್ಯಾಂಕುಗಳು ಸಶಕ್ತವಾಗಿವೆ. ಹೆಚ್ಚಿನ ಠೇವಣಿ ಸಂಗ್ರಹಿಸಿವೆ. ಆದರೆ, ವಾಣಿಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡುವ ಮಾನದಂಡ, ಅವಕಾಶ ಅರ್ಬನ್ ಸಹಕಾರ ಬ್ಯಾಂಕುಗಳಿಗೆ ದೊರೆಯುತ್ತಿಲ್ಲ ಎಂದರು.

ಅರ್ಬನ್ ಸಹಕಾರ ಬ್ಯಾಂಕುಗಳನ್ನು ಈಕ್ವಿಟಿ ಪದ್ಧತಿಗೆ ಒಳಪಡಿಸುತ್ತಿದೆ. ಇದರಿಂದ ಸಹಕಾರ ರಂಗ ಶ್ರೀಮಂತರ ಪಾಲಾಗಲಿದೆ. ಬಡ, ಮಧ್ಯಮ ವರ್ಗದವರ ಹಿತ ಕಾಪಾಡುವುದಕ್ಕಾಗಿ ಸಹಕಾರ ಬ್ಯಾಂಕುಗಳು ಜನ್ಮತಳೆದಿವೆ. ರಾಜ್ಯದಲ್ಲಿ 50 ಸಾವಿರ ಕೋಟಿ ರು.ಗೂ ಅಧಿಕ ಬಂಡವಾಳ ಇದೆ. ಇನ್ನೂ ದೇಶದಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ಇದೆ. ಇದರಲ್ಲಿ ಶೇ.25ರಷ್ಟನ್ನು ಸಹಕಾರದಿಂದ ಸರಕಾರಿ ವಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಕೇಂದ್ರ ಸರಕಾರದ ನೀತಿ ಹಾಗೂ ಆರ್‌ಬಿಐ ನೀತಿಯಿಂದ ಸಹಕಾರ ರಂಗಕ್ಕೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಸಹಕಾರಿಗಳು ಚರ್ಚಿಸಿ ಉನ್ನತ ಸ್ಥಾನದಲ್ಲಿದ್ದವರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಸಹಕಾರ ಬ್ಯಾಂಕುಗಳು ಹಾನಿಗೊಳಗಾದರೆ ಸರಕಾರ ನೆರವು ನೀಡುವುದಿಲ್ಲ. ಆದರೆ, ವಾಣಿಜ್ಯ, ರಾಷ್ಟ್ರೀಕೃತ ಬ್ಯಾಂಕುಗಳ ಬಾಕಿ ಶುದ್ಧಿಗೆ ಲಕ್ಷ ಲಕ್ಷ ಕೋಟಿ ರು. ನೆರವು ನೀಡಲಾಗುತ್ತಿದೆ. ಈ ತಾರತಮ್ಯ ಹೋಗಲಾಡಿಸಬೇಕು ಎಂದರು.

ವಿಕಾಸ ಬ್ಯಾಂಕ್ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಬ್ಯಾಂಕ್‌ನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಪರಿಶ್ರಮದಿಂದ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದರು.

Advertisement

ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಮಾತನಾಡಿ, ಕಳೆದ 25 ವರ್ಷಗಳಲ್ಲಿ ಬ್ಯಾಂಕು ಹಲವು ಪ್ರತಿಕೂಲ ಸನ್ನಿವೇಶ ಎದುರಿಸಿ ಬೆಳೆದಿದೆ. ೨೦೦೩ರಲ್ಲಿ ಸುಳ್ಳು ಆರೋಪದಿಂದ ಜನರು ಠೇವಣಿ ವಾಪಾಸ್ ಕೇಳಿದಾಗ ರಾತ್ರಿ ೨ ಗಂಟೆವರೆಗೂ ೬ ಕೋಟಿ ರು. ಠೇವಣಿ ವಾಪಾಸ್ ನೀಡಲಾಯಿತು. ಇನ್ನೂ ೨೦೧೧ರಲ್ಲೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಆಗಲೂ ಜನರ ವಿಶ್ವಾಸಗಳಿಸಿ ಬ್ಯಾಂಕು ಸಶಕ್ತವಾಗಿ ಬೆಳೆದಿದೆ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ಮಾತನಾಡಿದರು. ಕೊಟ್ಟೂರುಸಂಸ್ಥಾನಮಠದ ಕುರಗೋಡು ಶಾಖಾಮಠದ ಶ್ರೀಪರ್ವತದೇವರು ಸಾನ್ನಿಧ್ಯವಹಿಸಿದ್ದರು. ವಿಕಾಸ ಯುವಕ ಮಂಡಳದ ಸಂಸ್ಥಾಪಕ ಅಧ್ಯಕ್ಷ ದಿವಾಕರ, ಬ್ಯಾಂಕ್‌ನ ಸಿಇಒ ಪ್ರಸನ್ನ ಹಿರೇಮಠ ಮತ್ತಿತರರಿದ್ದರು. ಬ್ಯಾಂಕಿನ ಮಾಜಿ ನಿರ್ದೇಶಕ ಅನಂತ ಜೋಶಿ, ಅಧಿಕಾರಿ ಅನ್ನಪೂರ್ಣ ನಿರ್ವಹಿಸಿದರು.

ಶಂಕುಸ್ಥಾಪನೆ:

ನಗರದ ಪಟೇಲ್‌ನಗರದಲ್ಲಿ ಬ್ಯಾಂಕ್‌ನ ಪ್ರಧಾನ ಕಚೇರಿ ಕಟ್ಟಡಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಬೆಳಗ್ಗೆ ಶಂಕುಸ್ಥಾಪನೆ ನೆರವೇರಿಸಿದರು. ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next