Advertisement

ಅಧಿಕಾರ ಇಲ್ಲದಿದ್ದರೂ ಅಭಿವೃದ್ಧಿಗೆ ಶ್ರಮಿಸುವೆ : ಜಗದೀಶ ಶೆಟ್ಟರ

01:00 PM Aug 03, 2021 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಸೇರಿದಂತೆ ಯಾವುದೇ ಖಾತೆ ಸಿಕ್ಕರೂ ಕಡಿಮೆ ಅವಧಿ ದೊರೆತಿದೆ. ಐದು ವರ್ಷಗಳ ಕಾಲ ಒಂದು ಇಲಾಖೆಯ ಅಧಿಕಾರ ದೊರೆತಿದ್ದರೆ ಸ್ಪಷ್ಟ ರೂಪ ಕೊಡುತ್ತಿದ್ದೆ. ಆದರೆ ಇದೀಗ ಅಧಿಕಾರ ಹೋಗಿದೆಯಾದರೂ ಇಲ್ಲಿನ ಅಭಿವೃದ್ಧಿಗೆ ಶ್ರಮಿಸುವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಶಿರೂರ ಪಾರ್ಕ್‌ನ ಉದ್ಯಾನವನದಲ್ಲಿ ರಿಕ್ರಿಯೇಶನ್‌ ಭವನಕ್ಕೆ ಪೂರಕವಾದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಟೆಂಡರ್‌ ಶ್ಯೂರ್‌ ರಸ್ತೆಯಾದ ನಂತರ ಈ ಭಾಗದ ಚಿತ್ರಣವೇ ಬದಲಾಗಿದೆ. ಈ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳಾಗಿ ಒಳ ರಸ್ತೆಗಳನ್ನು ಬಳಸಿಕೊಳ್ಳಲಾಯಿತು. ಇದರಿಂದ ರಸ್ತೆಗಳು ಹಾಳಾಗಿದ್ದವು ಎನ್ನುವ ದೂರುಗಳು ಬಂದಿದ್ದವು. ಅಂದು ನೀಡಿದ ಭರವಸೆಯಂತೆ ಒಳ ರಸ್ತೆಗಳ ದುರಸ್ತಿ ಮಾಡಲಾಗಿದೆ. ಎರಡು ಬದಿಯಲ್ಲಿ ಕಾಂಕ್ರಿಟ್‌ ರಸ್ತೆ ಬರಲಿದ್ದು, ಧೂಳು ಮುಕ್ತ ಪ್ರದೇಶವಾಗಲಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಭೂಮಿಪೂಜೆ ನಂತರ ಕಾಮಗಾರಿ ಆರಂಭವಾಗಲಿದೆ. ಮಳೆಯಿಂದಾಗಿ ರಸ್ತೆಗಲ್ಲಿ ಗುಂಡಿಗಳಾಗಿದ್ದು, ಮಳೆ ಕಡಿಮೆಯಾದ ನಂತರ ಗುಂಡಿ ಮುಚ್ಚುವ ಕೆಲಸ ಆರಂಭವಾಗಲಿದೆ ಎಂದರು.

ಗೋಕುಲ ಕೈಗಾರಿಕೆ ಪ್ರದೇಶದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ನಡೆದ ಕಾಮಗಾರಿಗಳಿಂದ ರಾಜ್ಯದಲ್ಲಿ ಮಾದರಿ ಕೈಗಾರಿಕೆ ಪ್ರದೇಶವಾಗಿದೆ. ಇದರಂತೆ ತೋಳನಕೆರೆ ಸೇರಿದಂತೆ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಈ ಯೋಜನೆಗಳು ವಿಳಂಬವಾಗದೆ ಪೂರ್ಣಗೊಳಿಸುವ ಕೆಲಸ ಮಾಡಿಸುತ್ತೇನೆ. ಈ ಭಾಗದ ಕೈಗಾರಿಕೆ ಅಭಿವೃದ್ಧಿಗಾಗಿ ಏಕಸ್‌, ಇನ್‌ಪ್ಲೆಕ್ಸ್‌ ಸೇರಿದಂತೆ ಹಲವು ಕಂಪನಿಗಳು ಸಾವಿರಾರು ಕೋಟಿ ರೂ. ಹೂಡಿಕೆ ಮಾಡುವುದರೊಂದಿಗೆ ಸಾವಿರಾರು ಉದ್ಯೋಗ ಸೃಷ್ಟಿ ಮಾಡಲಿವೆ. ಎಫ್‌ಎಂಸಿಜಿ ವಲಯ ನಿರ್ಮಾಣದ ವಿಚಾರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಇದರ ಸ್ಥಾಪನೆಗೆ ಮೊದಲ ಆದ್ಯತೆ ಕೊಡಲಾಗುವುದು.ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಬೆಳಗಾವಿ ಕಣಗಾಲ ಕೈಗಾರಿಕೆ ಪ್ರದೇಶದಲ್ಲಿ ಗ್ಲಾಸ್‌ ತಯಾರಿಕೆ ಕಂಪನಿಯೊಂದಕ್ಕೆ 200 ಎಕರೆ ಭೂಮಿ ಮಂಜೂರು ಮಾಡಿಸಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ ಮಾತನಾಡಿ, ಶಿರೂರು ಪಾಕ್‌ನ ಒಳ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಉದ್ಯಾನದ ಲಾನ್‌ ಮಾಡಲಾಗಿದೆ. 12 ಲಕ್ಷ ರೂ. ವೆಚ್ಚದಲ್ಲಿ ರಿಕ್ರಿಯೇಶನ್‌ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಮತ್ತಿಷ್ಟು ಕೆಲಸಗಳು ಆಗಲಿವೆ. ಈ ಪ್ರದೇಶದಲ್ಲಿ 1.48 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ಶೋಲ್ಡರ್‌ ಕಾಮಗಾರಿ ನಡೆಯಲಿದೆ ಎಂದರು. ಮಂಜುನಾಥ ರೇವಣಕರ, ಆರ್‌.ಬಿ. ಗದಗಕರ, ಪ್ರಭು ಅಂಕಲಕೋಟೆ, ವಲಯ ಸಹಾಯಕ ಆಯುಕ್ತ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next