Advertisement

ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಎಲ್ಲೆಡೆ ಸಿಗಲಿದೆ ಗೌರವ 

03:53 PM Sep 30, 2018 | |

ಮುಂಡರಗಿ: ಶಾಲೆಯಲ್ಲಿ ಮಕ್ಕಳಿಗೆ ಪ್ರಾಮಾಣಿಕತೆಯಿಂದ ಪಾಠ ಕಲಿಸುವ ಶಿಕ್ಷಕರಿಗೆ ಗೌರವ ಇದ್ದೇ ಇರುತ್ತದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಪಟ್ಟಣದ ಜ| ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಿಪಂ, ತಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುರಸಭೆ, ಶಿಕ್ಷಕರ ದಿನೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯುವ ಶಕ್ತಿಯು ಆಶಾಕಿರಣವಾಗಿ ಹೊಮ್ಮಲು, ದೇಶ ಕಟ್ಟಲು ಶಾಲಾ ಕೊಠಡಿಯಲ್ಲಿ ಗುರುವಾದವರು ಮಾರ್ಗದರ್ಶನ ಮಾಡಬೇಕು. ಶಿಕ್ಷಕರು ಶಾಲೆಗಳ ಬಗ್ಗೆ ಗಮನ ಕೊಟ್ಟರೆ ಸರಕಾರದ ಯೋಜನೆಗಳು ಸಫಲವಾಗಲು ಸಾಧ್ಯವಾಗಲಿದೆ. ಶಿಕ್ಷಕರು ಹೊಲ, ರಿಯಲ್‌ ಎಸ್ಟೇಟ್‌ ಮಾಡುವುದನ್ನು ಬಿಟ್ಟು ಪ್ರಾಮಾಣಿಕತೆಯಿಂದ ಕಲಿಸಬೇಕು. ಶಿಕ್ಷಕರು ನಿಷ್ಠೆಯಿಂದ ಸಮಾಜ ಮೆಚ್ಚುವಂತೆ ನಡೆದುಕೊಂಡು ಕೆಲಸ ಮಾಡಬೇಕು ಎಂದು ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಫಲಿತಾಂಶ ಪಡೆದಿದ್ದಾರೆ. ಈ ಸಾಧನೆ ಮಾಡುವಲ್ಲಿ ಎಲ್ಲ ಶಿಕ್ಷಕರ ಪಾತ್ರವು ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಉತ್ತಮ ಫಲಿತಾಂಶವನ್ನು ತರುವಲ್ಲಿ ಈಗಿನಿಂದಲೇ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಹೇಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಜ| ನಾಡೋಜ ಡಾ| ಅನ್ನದಾನೀಶ್ವರ ಶಿವಯೋಗಿಗಳು ಆಶೀರ್ವಚನ ನೀಡಿ, ಶಿಕ್ಷಣದ ಮೂಲಕ ವ್ಯಕ್ತಿತ್ವ ರೂಪಗೊಳ್ಳಲಿದೆ. ವಿದ್ಯಾರ್ಥಿಗಳಲ್ಲಿ ದುಡಿದು ಉಣ್ಣುವ ಪ್ರವೃತ್ತಿಯ ಅರಿವು ಮೂಡಿಸಲು ಪ್ರಯತ್ನಿಸಬೇಕು. ದುಡಿಯದೇ ಇರುವ ಹಣವನ್ನು ಮುಟ್ಟದೇ, ದುಡಿದ ಹಣದಿಂದ ಮಾತ್ರ ಬದುಕು ಸಾಗಿಸಬೇಕು. ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಆತ್ಮಸ್ಥೈರ್ಯ, ಸ್ವಾಭಿಮಾನದಿಂದ ಜೀವನ ರೂಪಿಸಿಕೊಳ್ಳಬೇಕು ಎಂದರು.

ಜಿಪಂ ಸದಸ್ಯೆ ಶೋಭಾ ಮೇಟಿ ಮಾತನಾಡಿದರು. ತಹಶೀಲ್ದಾರ್‌ ಭ್ರಮರಾಂಭ ಗುಬ್ಬಿಶೆಟ್ಟಿ, ತಾಪಂ ಅಧ್ಯಕ್ಷೆ ರೇಣುಕಾ ಕೋರ್ಲಹಳ್ಳಿ, ಜಿಪಂ ಸದಸ್ಯರಾದ ಶಕುಂತಲಾ ಚೌಹಾಣ, ಈರಣ್ಣ ನಾಡಗೌಡ, ಕರಬಸಪ್ಪ ಹಂಚಿನಾಳ, ಎ.ಕೆ. ಬೆಲ್ಲದ, ಹೇಮಗೀರೀಶ ಹಾವಿನಾಳ, ರಜನೀಕಾಂತ ದೇಸಾಯಿ, ಮುದ್ಲಿಂಗಪ್ಪ ಕೋರ್ಲಹಳ್ಳಿ, ಬಸವರಾಜ ನರೇಗಲ್ಲ, ರುದ್ರಪ್ಪ ಬಡಿಗೇರ, ಎಸ್‌.ವಿ. ಪಾಟೀಲ, ದೇವಪ್ಪ ಕಂಬಳಿ, ಸೀತಾರಾಮರಾಜು, ಬಸವಂತಪ್ಪ ಮುದ್ದಿ, ನಾಗರಾಜ ಕಾಟ್ರಳ್ಳಿ, ಪ್ರಕಾಶ ಸಂಕಣ್ಣವರ್‌, ಎಸ್‌.ಎಸ್‌. ಕಲ್ಮನಿ ಮತ್ತಿತರರು ಇದ್ದರು. ಇಂಗ್ಲಿಷ್‌ ಪ್ರಾಯೋಗಿಕ ಕಲಿಕಾ ಪಠ್ಯವನ್ನು ಬಿಡುಗಡೆಗೊಳಿಸಲಾಯಿತು. ಉತ್ತಮ ಶಿಕ್ಷಕರು, ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next