Advertisement

Uchila Mahalakshmi Temple: ಕುಂಕುಮಾರ್ಚನೆ ಸೇವೆಗೆ ಮಹಿಳೆಯರಿಂದ ಭಾರೀ ಸ್ಪಂದನೆ

01:17 AM Oct 09, 2024 | Team Udayavani |

ಕಾಪು: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ. ಶಂಕರ್‌ ತೆರೆದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಸಹಿತ ಶ್ರೀ ಮಹಾಲಕ್ಷ್ಮೀ ಮಂಟಪದಲ್ಲಿ ಪ್ರತೀ ದಿನ ನಡೆಯುತ್ತಿರುವ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಭಾರೀ ಸ್ಪಂದನೆ ದೊರಕುತ್ತಿದೆ.

Advertisement

ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್‌ ಅವರ ಉಪಸ್ಥಿತಿ, ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದೊಂದಿಗೆ ಸಂಜೆ 5.45ರಿಂದ 61.5ರ ವರೆಗೆ ಸುಮಂಗಲೆಯರ ಸಂಕಲ್ಪ ಸೇವೆ ಯೊಂದಿಗೆ ಆರಂಭಗೊಂಡು ಶ್ರೀ ಮಹಾಲಕ್ಷ್ಮೀ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ ಮಾಡಿದ ಬಳಿಕ ಮಹಾಮಂಗಳಾರತಿ ಬೆಳಗಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸುಮಂಗಲೆ ಯರು ಪಾಲ್ಗೊಳ್ಳುತ್ತಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ಸಂದರ್ಭ ಸಾಮೂಹಿಕ ಕುಂಕುಮಾರ್ಚನೆ ಸೇವೆಗೆ ಚಾಲನೆ ನೀಡಲಾಗಿತ್ತು. ಬಳಿಕ ದಸರಾ ಸಂದರ್ಭದಲ್ಲಿಯೂ ಮುಂದುವರಿಸಲಾಗಿತ್ತು. ಕೋಟ್ಯಂತರ ಸಂಖ್ಯೆಯಲ್ಲಿ ಸೇವೆ ನಡೆಸಲಾಗಿದೆ.

ಭಕ್ತರ ಇಷ್ಟಾರ್ಥ ಸಿದ್ಧಿ
ಈ ಸನ್ನಿಧಾನದಲ್ಲಿ ನಡೆಯುತ್ತಿರುವ ಕುಂಕುಮಾರ್ಚನೆ ಸೇವೆಯಲ್ಲಿ ಪಾಲ್ಗೊಳ್ಳುವ ಸುಮಂಗಲೆಯರ ಮಾಂಗಲ್ಯ ಭಾಗ್ಯ, ಮಾಂಗಲ್ಯ ರಕ್ಷಣೆ, ಸಂತಾನ, ಸುಖ, ಶಾಂತಿ, ಸಮೃದ್ಧಿಗಾಗಿ ಪಾರ್ಥಿಸಲಾಗುತ್ತದೆ. 3 ವರ್ಷಗಳ ಸೇವೆಯಲ್ಲಿ ಪಾಲ್ಗೊಂಡ ಬಹಳಷ್ಟು ಯುವತಿಯರಿಗೆ ತಾಳಿ ಭಾಗ್ಯ, ಸಂತಾನ ಭಾಗ್ಯ ಸಹಿತ ಇಷ್ಟಾರ್ಥಗಳನ್ನು ತಾಯಿ ಕರುಣಿಸಿದ್ದಾಳೆ. ಹಾಗಾಗಿ ಈ ಸೇವೆಗೆ ಬಹಳಷ್ಟು ಮಹತ್ವ ನೀಡಲಾಗುತ್ತಿದೆ ಎನ್ನುತ್ತಾರೆ ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್‌.ದ.ಕ. ಮೊಗವೀರ ಮಹಾಜನ ಸಂಘದ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಮಹಾಜನ ಸಂಘದ ಪದಾಧಿಕಾರಿಗಳು ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇಂದಿನ ಕಾರ್ಯಕ್ರಮ
ಉಚ್ಚಿಲ ದಸರಾ ಪ್ರಯುಕ್ತ ಅ. 9ರಂದು ಬೆಳಗ್ಗೆ 9ಕ್ಕೆ ಚಂಡಿಕಾಹೋಮ, 9.30ರಿಂದ ಭಜನೆ, 12 ಗಂಟೆಗೆ ನವದುರ್ಗೆಯರು, ಶಾರದಾ ಮಾತೆಗೆೆ ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಾರುಣಿ ನಾಗರಾಜ್‌ ಪ್ರವಚನ ನೀಡಲಿದ್ದಾರೆ. 5.45ರಿಂದ 6.15ರವರೆಗೆ ಸಾಮೂಹಿಕ ಕುಂಕುಮಾರ್ಚನೆ, 6.30ರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next