ಇನ್ನೇನು, ಪದವಿಯ ಎರಡನೇ ವರ್ಷ ಪ್ರಾರಂಭವಾಗಲಿದೆ, ಹೊಸ ಬಟ್ಟೆ ಬೇಕು. ಆದರೆ, ನನ್ನ ಜೊತೆ ಬರಲು ಅಮ್ಮನಿಗೆ ರಜೆ ಇಲ್ಲ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ಅವಳನ್ನು ಸಂಜೆ ಶಾಪಿಂಗ್‌ಗೆ ಕರೆಯುವುದೂ ಸರಿ ಅಲ್ಲ. ಆದ್ದರಿಂದ ಆನ್‌ಲೈನ್‌ನಿಂದ ಬಟ್ಟೆಗಳನ್ನು ತರಿಸಿಕೊಂಡೆ !
ಕಾಲ ಎಷ್ಟು ಬದಲಾಗಿದೆ ! ನಾವು ಚಿಕ್ಕವರಿದ್ದಾಗ ಆಟ ಮುಗಿದ ನಂತರ ನಮ್ಮ ನೆಚ್ಚಿನ ಅಜ್ಜನ ಅಂಗಡಿಗೆ ಹೋಗಿ ಎಲ್ಲರೂ ಸೇರಿ ಮಿಠಾಯಿ ತಿಂದು ಮನೆಗೆ ಹೋಗುವುದು ರೂಢಿಯಾಗಿತ್ತು, ಅಪ್ಪನೊಂದಿಗೆ ಬೈಕ್ ಏರಿ ಎದುರಿನ ಟ್ಯಾಂಕ್ ಮೇಲೆ ಕುಳಿತುಕೊಂಡು ಅಮ್ಮ ಹೇಳಿದ್ದನ್ನು ತರುವುದು ಖುಷಿಯ ಸಂಗತಿಯಾಗಿತ್ತು!
ಹಬ್ಬದ ಒಂದೆರಡು ದಿನ ಮೊದಲೇ ಮನೆಯವರೆಲ್ಲರೂ ಬಟ್ಟೆ ಅಂಗಡಿಗೆ ಹೋಗಿ, ಈ ಡಿಸೈನಿನಲಿ ಆ ಬಣ್ಣ – ಈ ಬಣ್ಣದಲ್ಲಿ ಆ ಡಿಸೈನಿನಲ್ಲಿ ಎಂದು ಕೇಳಿ ಅಂಗಡಿಯವನ ತಲೆ ತಿಂದು, ಕೊನೆಗೆ ಬಟ್ಟೆಯನ್ನು ಮುಟ್ಟಿ ನೋಡಿ ಇಷ್ಟವಾದದ್ದನ್ನು ಖರೀದಿಸಿ ಕೊಂಡು, ಬೋನಸ್ ಎಂಬಂತೆ ನಮಗೆಲ್ಲ ಒಂದೊಂದು ಐಸ್‌ಕ್ರೀಮ್ ಕೊಡಿಸಿ ಮನೆಗೆ ಮರಳುವುದಾಗಿತ್ತು! ಬಟ್ಟೆ ಖರೀದಿಸಲು ಹೋಗುವುದು ಹಬ್ಬದಷ್ಟೇ ಖುಷಿಯ ವಿಚಾರ.
ಆದರೆ, ಈಗ ಯಾರಿಗೂ ಸಮಯವಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ, ಯಾರಿಗೂ ಯಾವುದಕ್ಕೂ ಸಮಯವಿಲ್ಲ! ಸಮಯ ಉಳಿಸಲು ಎಲ್ಲರೂ ಈಗ ಆನ್‌ಲೈನ್‌ನ ಮೊರೆ ಹೋಗಿದ್ದಾರೆ. ಮನೆಗೆ ದಿನಸಿ ಸಾಮಾನು, ಬಟ್ಟೆಗಳು, ಪೀಠೊಪಕರಣ, ಗ್ಯಾಜೆಟ…, ತಿಂಡಿತಿನಿಸುಗಳು ಎಲ್ಲವೂ ಆನ್‌ಲೈನ್ ಮಯ! ಕೂತಲ್ಲೇ ಆರ್ಡರ್ ಮಾಡಿದರಾಯಿತು, ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಮೊದಲಿನ ಖುಷಿ-ಮಜಾ ಈಗ ಅದ್ಯಾವುದೂ ಇಲ್ಲ.
ಸಿಂಧೂ ಹೆಗಡೆ
ದ್ವಿತೀಯ ಬಿ. ಎ., ಎಸ್‌ಡಿಎಂ ಕಾಲೇಜು, ಉಜಿರೆ.