ಕಲಬುರಗಿ: ಹೈದ್ರಾಬಾದ ಮತ್ತು ಮುಂಬೈ ಕರ್ನಾಟಕದ ಸಮಸ್ಯೆಗಳ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಸಲವೂ ಬೆಳಗಾವಿಯಲ್ಲಿ ಅಧಿವೇಶನ ಕರೆಯುತ್ತೇವೆ. ಇದರಲ್ಲಿ ಯಾವುದೇ ಹೊಸತನವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಸಮಸ್ಯೆಗಳು ಬೇಗ ಪರಿಹಾರವಾಗಲಿ ಎಂದು ಬೆಳಗಾವಿ ಅಧಿವೇಶನ ಮಾಡಲಾಗುತ್ತಿದೆ. ಅಂದ ಮಾತ್ರಕ್ಕೆ ಅಧಿವೇಶನವಿದ್ದಾಗ ಮಾತ್ರ ಚರ್ಚಿಸುತ್ತೇವೆ ಎಂದಲ್ಲ ಎಂದು ಸ್ಪಷ್ಟ ಪಡಿಸಿದರು.
ಸುವರ್ಣ ವಿಧಾನಸೌಧಕ್ಕೆ ಬಿಜೆಪಿ ಮುತ್ತಿಗೆ ಹಾಕುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಂದ ನಾವೇನು ಬೆನ್ನು ಚಪ್ಪರಿಸಿಕೊಳ್ಳಬೇಕಾಗಿದೆಯೇ? ಈಗಾಗಲೇ ಬರ ಪೀಡಿತ ತಾಲೂಕುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ರೈತರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸಬೇಕು ಹಾಗೂ ಕುಡಿಯುವ ನೀರು, ಮೇವಿನ ಸಮಸ್ಯೆ ಪರಿಹಾರಕ್ಕೆಂದು ಅಧಿಕಾರಿಗಳಿಗೆ ಸಿಎಂ ಮತ್ತು ಡಿಸಿಎಂ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ರೈತರ ಅಭಿವೃದ್ಧಿಗಾಗಿ ಬಿಜೆಪಿಯವರು ಏನು ಮಾಡಿದ್ದಾರೆ ಹೇಳಿ? ಬಿಜೆಪಿಯವರು ಮಾಡೋದನ್ನು ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ ಎಂದರು.
ರೈತರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದರೂ ಬಿಜೆಪಿಯವರಿಗೆ ಕಾಣಸಲಿಲ್ವಾ? ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದ್ದು, ರೈತರ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ. ಇದಕ್ಕೆ ಬಿಜೆಪಿಯವರು ವೇದಿಕೆ ಸೃಷ್ಟಿ ಮಾಡಿ ಕೊಡುತ್ತಾರಾ ಎಂದು ಸವಾಲು ಎಸೆದರು. ಇದೇ ವೇಳೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ 37 ಸಾವಿರ ಕೋಟಿ ರೂ.ಅವ್ಯವಹಾರವಾಗಿದೆ ಎಂದು ಆರೋಪಿಸುವ ಮೂಲಕ ಬಿಜೆಪಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.