ಬನಹಟ್ಟಿ: ಮಕ್ಕಳ ಶೈಕ್ಷಣಿಕ ಗುಣಮಟ್ಟ, ದೇಶ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪರೀಕ್ಷೆಗಳು ಕಡ್ಡಾಯವಾಗಿ ನಡೆಯಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರದ ತೀರ್ಮಾನ ಸರಿಯಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳ ಸಹಾಯ ಸಹಕಾರ ಮುಖ್ಯ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ತಾಲೂಕಿನ ವಿವಿಧ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಶನಿವಾರ ಪರಿಶೀಲನೆ ಮಾಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಮಾತನಾಡಿ, ಒಟ್ಟು 24 ಪರೀಕ್ಷಾ ಕೇಂದ್ರಗಳಲ್ಲಿ 7746 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 700ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಪಡೆದುಕೊಳ್ಳಲಾಗಿದೆ. ಪ್ರತಿಯೊಂದು ಕೋಣೆಯಲ್ಲಿ ಕನಿಷ್ಠ 15 ಗರಿಷ್ಠ 24 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಎರಡು ವಿಶೇಷ ಕೋಣೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಶಾಲೆ ಆವರಣದಲ್ಲಿ ಸ್ಕ್ರೀನಿಂಗ್ ಮಾಡಲಾಗುವುದು ಎಂದರು.
ತೋಟ ಮತ್ತು ಬೇರೆ ಕಡೆಯಿಂದ ಪರೀಕ್ಷಾ ಕೇಂದ್ರಕ್ಕೆ 1025 ವಿದ್ಯಾರ್ಥಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಕರೆ ತರುವ 45 ಮಾರ್ಗಗಳನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರ ಬರಲು ತೊಂದರೆಯಾಗುವಂತಹ 250 ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಈ ವೇಳೆ ಸಿಪಿಐ ಜಿ. ಕರುಣೇಶಗೌಡ, ಪಿಎಎಸ್‌ಐ ರವಿಕುಮಾರ ಧರ್ಮಟ್ಟಿ, ರವೀಂದ್ರ ಸಂಪಗಾವಿ, ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಜಾಡಗೌಡ, ಉಪಾಧ್ಯಕ್ಷ ಶ್ರೀಶೈಲ ಭದ್ರನವರ, ಮುಖ್ಯ ಶಿಕ್ಷಕರಾದ ಎಂ.ಎಂ. ಹೊಂಬರಡಿ, ರವಿ ಬಸಗೊಂಡನವರ, ತಳವಾರ, ಆರ್.ಡಿ. ಪಾಠಕ, ಎಂ.ಜಿ. ಕಲಕಂಬ ಇದ್ದರು.