ಸೇಡಂ: ರಾಹುಲ್ ಗಾಂಧಿ ಅವರನ್ನೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು ಎಂಬುದು ಕಾರ್ಯಕರ್ತರ, ಯುವಕರ ಆಶಯವಾಗಿದೆ ಎಂದು ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಶೀಘ್ರವೇ ಪಕ್ಷದ ಹಿರಿಯ ಮುಖಂಡರೆಲ್ಲ ಸಭೆ ಸೇರಿ ಮುಂದಿನ ನಿರ್ಣಯದ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಫಲಿತಾಂಶ ನನಗೆ ಸೋಲು ತಂದಿದೆ.
ನಾನು ಸೋಲು ಒಪ್ಪಿಕೊಂಡಿದ್ದೇನೆ. ಆದರೆ ದೇಶದ ಬಹುತೇಕ ಕಡೆ ವ್ಯತ್ಯಾಸಗಳು ಕಂಡು ಬಂದಿದ್ದು, ಜನ ಇವಿಎಂ ಮೇಲೆ ಅನುಮಾನಗೊಂಡಿದ್ದಾರೆ. ಅದಕ್ಕಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಲೋಕಸಭೆಯಲ್ಲಿ ನಾಲ್ಕು ನೂರು ಜನ ಸಂಸದರಿಗೆ ಹೆದರದ ನಾನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮತ್ತು ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಅವರಿಗೆ ಏಕೆ ಹೆದರಲಿ.
ಯಾರು ಏನೇ ಎನ್ನಲಿ ಅದಕ್ಕೆಲ್ಲ ಉತ್ತರ ಕೊಡೋದ್ರಿಂದ ಅವರು ದೊಡ್ಡವರಾಗ್ತಾರೆ. ನಮ್ಮ ಕಿಮ್ಮತ್ತು ಕಡಿಮೆಯಾಗುತ್ತದೆ. ಜಾತಿ, ಧರ್ಮ ಮತ್ತು ಪಾಕಿಸ್ತಾನ ಎಂಬ ವಿಷಬೀಜ ಬಿತ್ತಿ ಮತ ಪಡೆಯಲಾಗುತ್ತಿದೆ. ನಾವೂ ದೇಶಭಕ್ತರೇ. ನಾವೂ ಪಾಕಿಸ್ತಾನದ ವಿರುದ್ಧ ಸಮರ ಸಾರಿದ್ದೇವೆ. ಕಾಂಗ್ರೆಸ್‌ನವರೆಲ್ಲ ಪಾಕಿಸ್ತಾನದವರಾ? ಧರ್ಮದ ಹೆಸರಲ್ಲಿ ದೇಶ ಇಬ್ಭಾಗ ಮಾಡಲಾಗುತ್ತಿದೆ. ದೇಶಕ್ಕೆ ಶಾಶ್ವತ ವಿಚಾರಗಳ ಅವಶ್ಯಕತೆ ಇದೆ ಎಂದರು.