ಹುಣಸೂರು: ನ್ಯಾಯಾಲಯದ ವಕೀಲರ ಭವನದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ವಕೀಲರು, ಕಕ್ಷಿದಾರರಿಗೆ ಪರಿಸರ ಪಾಠ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ತಾಲೂಕು ಕಾನುನೂ ಸೇವಾಸಮಿತಿ, ಅಭಿಯೋಜನಾ ಇಲಾಖೆ ಮತ್ತು ವಕೀಲರ ಸಂಘದಿಂದ ಆಯೋಜಿಸಿದ್ದ ವಿಶ್ವಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ದೀಪಾ ಮಾತನಾಡಿದರು.
ಇಂದು ಇಡೀ ದೇಶವೇ ಜಲಕ್ಷಾಮ ಎದುರಿಸುತ್ತಿದ್ದು, ನದಿ, ಕೆರೆ- ಕಟ್ಟೆಗಳಲ್ಲಿ ನೀರಿಲ್ಲಂದಂತಾಗಿದೆ. ಇದರಿಂದ ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ದೇಶದ ಅಭಿವೃದ್ಧಿಗೂ ತೊಡಕಾಗಿದ್ದು, ಎಲ್ಲರೂ ನೀರು ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಶವಿದ್ದು, ಮುಂದಿನ ಪೀಳಿಗೆಗೆ ಅನುಕೂಲವಾಗುವ ದೃಷ್ಟಿಯಿಂದ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಸರಕಾರಿ ಸಹಾಯಕ ಅಭಿಯೋಜಕ ನಾರಾಯಣ್ ಮಾತನಾಡಿ, ಅಬ್ದುಲ್ ಕಲಾಂ ಹಾಗೂ ವಾಜಪೇಯಿ ಕನಸಿನ ಗಂಗಾ-ಕಾವೇರಿ ನದಿ ಜೋಡಣೆ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ದೇಶದ ಜಲ ಸಮಸ್ಯೆ ನೀಗಲಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ ಹಾಗೂ ದೇವರಾಜ ಅರಸರು ಹಳ್ಳಿಗಳ ಅಭಿವೃದ್ಧಿಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿ, ಜಲ ಸಂರಕ್ಷಣೆಗೆ ಮುಂದಾಗಿದ್ದರು, ಅವರ ಆಶಯವನ್ನು ಮುಂದುವರೆಸುವ ಅತ್ಯವಶ್ಯವಿದೆ ಎಂದು ತಿಳಿಸಿದರು.
ವಕೀಲ ನಾಗೇಂದ್ರ ನೀರಿನ ಮಹತ್ವ ಮತ್ತು ಸಂರಕ್ಷಣೆ ಕುರಿತು ಮಾತನಾಡಿ, ದೇಶದಲ್ಲಿ 1974ರಲ್ಲಿ ನದಿ ನೀರು ಮಲೀನವಾಗುತ್ತಿರುವುದನ್ನು ತಡೆಗಟ್ಟುವ ಹಿನ್ನೆಲೆ ಕಠಿಣ ಕಾಯ್ದೆ ಜಾರಿಗೊಳಿಸಿದೆ ಎಂದರು. ಸಿವಿಲ್ ನ್ಯಾಯಾಧೀಶರಾದ ಗಿರೀಶ್‌ಚಟ್ನಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಚನ್ನಬಸಪ್ಪ, ಸಭೆಯಲ್ಲಿ ಅಪರ ಸರಕಾರಿ ವಕೀಲ ವೆಂಕಟೇಶ್, ಸರಕಾರಿ ಅಭಿಯೋಜಕಿ ರೇಖಾ, ವಕೀಲರ ಸಂಘದ ಕಾರ್ಯದರ್ಶಿ ನರಸಿಂಹೇಗೌಡ, ಉಪಾಧ್ಯಕ್ಷ ಯೋಗಣ್ಣೇಗೌಡ ಇತರರು ಇದ್ದರು.