Advertisement

ಮಾಹಿತಿ ಹಕ್ಕಿನ ಪ್ರಯೋಜನ ಎಲ್ಲರಿಗೂ ಸಿಗಲಿ

06:33 AM Feb 03, 2019 | |

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ ಪ್ರಯೋಜನಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸುವ ಮೂಲಕ ನಾಗರಿಕ ಸಮಾಜವನ್ನು ಸದೃಢಗೊಳಿಸಿ, ಸರ್ಕಾರಿ ಕಾರ್ಯವೈಖರಿಯನ್ನು ಪರಿಣಾಮಕಾರಿಯಾಗಿಸಬೇಕು ಎಂದು ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಮಾಹಿತಿ ಆಯೋಗದಿಂದ ವಿಧಾನಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಆರ್‌ಟಿಐ ಕಾಯ್ದೆಯಡಿ ನ್ಯಾಯತೀರ್ಮಾನ ಪ್ರಕ್ರಿಯೆಗಳು’ ಕುರಿತ ಕಾರ್ಯಗಾರದಲ್ಲಿ ಮಾತನಾಡಿ, ಆರ್‌ಟಿಐ ಮೂಲಕ ಮಾಹಿತಿ ಪಡೆಯುತ್ತಲೇ ಸರ್ಕಾರಿ ಯಂತ್ರವನ್ನು ಇನ್ನಷ್ಟು ಚುರುಕುಗೊಳಿಸುವ ಕೆಲಸ ಜನ ಸಾಮಾನ್ಯರಿಂದ ಆಗಬೇಕು ಎಂದರು.

ಸಾಮಾನ್ಯರಿಗೆ ಆರ್‌ಟಿಐ ಕುರಿತು ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಕರ್ನಾಟಕ ಕಾನೂನು ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರಗಳು ಮಾಡಬೇಕು. ಈ ದೇಶದ ಜನರಲ್ಲಿ ಸಕಾರಾತ್ಮಕ ಮನಸ್ಥಿತಿ ಇದ್ದು, ಇಂತಹ ಚಿಂತನೆಗಳು ಸಮಾಜದ, ದೇಶದ ಅಭಿವೃದ್ಧಿಗೆ ಅತ್ಯಗತ್ಯ ಎಂದು ಹೇಳಿದರು.

ಗೌಪ್ಯತೆ ಇರಬಾರದು: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಮಾತನಾಡಿ, ಆರ್‌ಟಿಐ ಮೂಲಕ ಪಡೆದ ಮಾಹಿತಿ ಆಡಳಿತ ಸುಧಾರಣೆಗೆ ಬಳಕೆಯಾಗಬೇಕು. ಆರ್‌ಟಿಐ ಮಾಹಿತಿ ಆಧರಿಸಿ ಸರ್ಕಾರದ ಕಾರ್ಯ ವೈಖರಿ ಸುಧಾರಣೆಗೆ ಸಲಹೆ ಸೂಚನೆ ನೀಡಬೇಕು. ಸರ್ಕಾರ ಮತ್ತು ಜನರ ಮಧ್ಯೆ ಗೌಪ್ಯತೆ ಇರಬಾರದು.

ಕಾನೂನಿನ ಅರಿವು ಮತ್ತು ಉಪಯೋಗ ಜನ ಸಾಮಾನ್ಯರಿಗೆ ಆಗಬೇಕು ಎಂದರು. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮಹಾ ಪರಿವೀಕ್ಷಕ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ರಾಜಸ್ವ ಕುರಿತು 2017-18ರಲ್ಲಿ ದಾಖಲಾಗಿದ್ದ 450 ದೂರುಗಳೂ ಇತ್ಯರ್ಥವಾಗಿವೆ.

Advertisement

2018-19ರಲ್ಲಿ 400 ದೂರುಗಳು ಬಂದಿದ್ದು, 390 ಪ್ರಕರಣ ಇತ್ಯರ್ಥಗೊಂಡಿವೆ ಎಂದು ಮಾಹಿತಿ ನೀಡಿದರು. ಹೈಕೋರ್ಟ್‌ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ, ನ್ಯಾಯಮೂರ್ತಿ ದೀಕ್ಷಿತ್‌ ಕೃಷ್ಣ ಪ್ರಸಾದ್‌, ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎಲ್‌.ಕೃಷ್ಣಮೂರ್ತಿ ಮೊದಲಾದವರು ಇದ್ದರು.

ಗತ ವೈಭವ ಮರಳುವ ಕಾಲ ಸನ್ನಿಹಿತ: ಕರ್ನಾಟಕ ಹೈಕೋರ್ಟ್‌ಗೆ ವಾಪಾಸ್‌ ಬಂದಿರುವುದಕ್ಕೆ ತವರಿಗೆ ಬಂದಷ್ಟೇ ಸಂತಸವಾಗಿದೆ. ಬೆಂಗಳೂರು ತನ್ನ ಗತವೈಭವಕ್ಕೆ ಮರಳುವ ಕಾಲ ಸನ್ನಿಹಿತವಾಗಿದೆ. ಬೆಂಗಳೂರಿನ ಸೌಂದರ್ಯಕ್ಕೆ ಸಂಬಂಧಿಸಿದಂತೆ ಬ್ಯಾನರ್‌ ಮತ್ತು ಫ್ಲೇಕ್ಸ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದೇವು.

ನಂತರ ದಿನಗಳಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಬ್ಯಾನರ್‌, ಫ್ಲೇಕ್ಸ್‌ಗಳನ್ನು ತೆರವುಗೊಳಿಸಿದ್ದರು. ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡಾಗ ಎಲ್ಲ ವಿಚರಣೆಯಂತೆ ಇದು ಕೂಡ ಸಾಮಾನ್ಯವಾಗಿ ಮುಗಿಯುತ್ತದೆ ಎಂಬ ಅನುಮಾನವಿತ್ತು. ಪ್ರತಿ ಬಾರಿಯೂ ವಿಚಾರಣೆ ತೀವ್ರವಾದಂತೆ, ಜನರಲ್ಲಿ ವಿಶ್ವಾಸ ಹೆಚ್ಚಾಯಿತು ಎಂದು ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next