ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಹೇಳಿಕೆ ನೀಡಿದ್ದಾರೆ.
ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಧ್ಯಪ್ರದೇಶದವನಾದ ನಾನು ಕರ್ನಾಟಕಕ್ಕೆ ಬಂದಿರುವುದು ಸಂತಸವಾಗುತ್ತಿದೆ.ನಾನು ಕೂಡ ಕನ್ನಡ ಕಲಿಯುತ್ತಿದ್ದೇನೆ. ಭಾರತದಲ್ಲಿಯೇ ಕರ್ನಾಟಕ ರಾಜ್ಯ ಸಮೃದ್ಧ, ಮಹತ್ವಪೂರ್ಣ ರಾಜ್ಯವಾಗಿದೆ. ಎಲೆಕ್ಟ್ರಾನಿಕ್, ಇಂಜಿನಿಯರಿಂಗ್, ವೈದ್ಯ ಲೋಕ, ಸಂಗೀತ, ವಿದ್ಯೆ, ಸೇರಿದಂತೆ ಹಲವು ಆಯಾಮಗಳಲ್ಲಿ ರಾಜ್ಯ ಸಮೃದ್ಧವಾಗಿದೆ’ ಎಂದರು.
‘ಕೇಂದ್ರ ಸರ್ಕಾರವೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಹೊರಟಿದೆ. ಹಲವಾರು ಆಯಾಮಗಳಲ್ಲಿ ಯೋಚಿಸಿ, ಚಿಂತಿಸಿ, ಹಲವಾರು ಅನುಭವಸ್ತರೊಂದಿಗೆ ಚರ್ಚಿಸಿ, ಈ ನೂತನ ನೀತಿ ಜಾರಿಗೆ ತರಲಾಗಿದೆ. ಶಿಕ್ಷಣ ತಜ್ಞರ ಅನುಭವದ ಆಧಾರದ ಮೇಲೆ ನೂತನ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವೇ ಪ್ರಥಮವಾಗಿ ಈ ನೀತಿ ಒಪ್ಪಿಕೊಂಡಿರುವ ರಾಜ್ಯವಾಗಿದೆ. ಗುರು ಹಾಗೂ ಶಿಷ್ಯರ ನಡುವಿನ ವಿಶೇಷ ಸಮಾಗಮವು ಈ ನೂತನ ಶಿಕ್ಷಣ ನೀತಿಯಲ್ಲಿ ಜಾರಿಗೆ ತರಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಅನೇಕ ಭಾಷೆ ಬಳಸಲಾಗುತ್ತದೆ. ಆದರೆ, ಈ ನೀತಿಯಲ್ಲಿ ಕ್ಷೇತ್ರಿಯ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಇಂಗ್ಲಿಷ್ ಭಾಷೆ ಕಲಿತರಷ್ಟೇ ನಾವು ವೈದ್ಯರಾಗುತ್ತೇವೆ, ಇಂಜಿನಿಯರ್ ಆಗುತ್ತೇವೆ ಎಂಬುದು ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ, ಇಂಗ್ಲಿಷ್ ಭಾಷೆ ಬಳಸದೇ, ಜರ್ಮನಿಯಲ್ಲಿ, ಜಪಾನ್ ನಲ್ಲಿ, ಸೇರಿದಂತೆ ಅನೇಕ ದೇಶಗಳಲ್ಲಿ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ನೂತನ ಶಿಕ್ಷಣ ನೀತಿಯಲ್ಲಿ ಜಾರಿಗೊಳಿಸಲಾಗಿದೆ’.
‘ಬಿಹಾರದ ನಳಂದ ವಿವಿ, ಪ್ರಪಂಚದಲ್ಲಿಯೇ ಗುರುತಿಸಲ್ಪಡುತ್ತದೆ.ಶಿಕ್ಷಕರು ಮತ್ತು ಶಿಷ್ಯರ ನಡುವೆ, ಅರ್ಜುನ, ಕೃಷ್ಣರ ನಡುವೆ ನಡೆಯುವಂತೆ ಸಂವಾದಗಳು ನಡೆಯುವ ಅವಶ್ಯಕತೆ ಇದೆ.ನೂತನ ಶಿಕ್ಷಣ ನೀತಿಯಲ್ಲಿ ಇವೆಲ್ಲವೂ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ’ ಎಂದರು.
ಇದೆ ವೇಳೆ ಸಂಸದ ಬಿ.ವೈ. ರಾಘವೇಂದ್ರ ಉತ್ತಮ ಸಂಸದೀಯ ಪಟುವಾಗಿ ಹೊರಹೊಮ್ಮಿದ್ದಾರೆ ಎಂದು ರಾಜ್ಯಪಾಲರು ಹೇಳಿದರು.