Advertisement

ಸರ್ವರಿಗೂ ಕಾನೂನು ಅರಿವು ಅಗತ್ಯ

09:38 PM Nov 12, 2019 | Team Udayavani |

ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಜೊತೆಗೆ ಪ್ರತಿಯೊಬ್ಬರು ಸಮಾನ ಅವಕಾಶಗಳಿಂದ ಸಹಬಾಳ್ವೆ ನಡೆಸಬೇಕಾದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಅರಿವು ನೆರವು ತಲುಪಿಸುವುದು ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಹೆಚ್‌.ದೇವರಾಜ್‌ ತಿಳಿಸಿದರು.

Advertisement

ನಗರದ ವಾಪಸಂದ್ರದಲ್ಲಿರುವ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಮತ್ತು ಡಾ.ಶ್ರೀ ಜಚನಿ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಒಂದು ದೇಶ ಒಂದು ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಅರಿವು ಮೂಡಿಸಿ: ಕಾನೂನು ಪಾಲನೆಯಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ದಿಸೆಯಲ್ಲಿ ಇಂದಿನ ವಿದ್ಯಾರ್ಥಿ ಯುವ ಪೀಳಿಗೆಯು ಕಾನೂನು ಪ್ರಾಮುಖ್ಯತೆಯನ್ನು ಅರಿಯುವುದರ ಜೊತೆಗೆ ಅನಕ್ಷರಸ್ಥ ಜನರಲ್ಲಿ ಕೂಡ ಕಾನೂನು ಅರಿವು ಮೂಡಿಸುವುದು ಅವಶ್ಯ ಎಂದರು. ಕಾನೂನು ಅರಿವು ಇಲ್ಲದೇ ಬಹಳಷ್ಟು ಜನ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಕಾನೂನು ತಿಳುವಳಿಕೆ ಇದ್ದಾಗ ಆರೋಗ್ಯವಂತ ನಾಗರಿಕ ಸಮಾಜ ನಿರ್ಮಾಣ ಆಗುತ್ತದೆ ಎಂದರು.

ಅನಿಷ್ಟ ಪದ್ಧತಿ ನಿರ್ಮೂಲನೆಯಾಗಲಿ: ಪ್ರತಿಯೊಬ್ಬರು ಕಾನೂನುಗೆ ಗೌರವ ಕೊಟ್ಟು ಸಂವಿಧಾನ ಬದ್ಧವಾದ ಹಕ್ಕುಗಳನ್ನು ಹಾಗೂ ಕರ್ತವ್ಯ ಪಾಲಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ. ಬಾಲ್ಯವಿವಾಹ ನಿಷೇಧದಂತಹ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಪರಿಣಾಮ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಮಾಜದಲ್ಲಿ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಕಾನೂನು ಅರಿವು ಬಹಳ ಮುಖ್ಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಸಿ.ಹೆಚ್‌.ಸುರೇಶ್‌ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಿಗೂ ಒಂದೇ ಕಾನೂನು, ಒಂದೇ ಸಂವಿಧಾನ ಹಾಗೂ ಒಂದೇ ದೇಶವನ್ನಾಗಿ ಸ್ವೀಕರಿಸಿ ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಸಾರ್ವಭೌಮತ್ವದ ಜೊತೆಗೆ ಜಾತ್ಯತೀತ ತತ್ವಗಳನ್ನು ಪಾಲಿಸಬೇಕಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದೆ ಎಂದರು.

Advertisement

ಕಾನೂನುಗಳನ್ನು ನಾವು ಎಲ್ಲಿಯವರೆಗೂ ಪಾಲಿಸುವುದಿಲ್ಲವೋ ಅಲ್ಲಿಯವರೆಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಕಾನೂನಿಗೆ ಗೌರವ ಕೊಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದ ಸಂಪತ್ತುಕುಮಾರ್‌. ಮುನಿರಾಜು, ರೋಜಾ ಸೇರಿದಂತೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ಪ್ಯಾನಲ್‌ ವಕೀಲರು ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next