ಸೇಡಂ: ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದ್ದು, ತಮಗೆ ಸೇರಿದ ಮೂಲ ದಾಖಲೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯವಾದಿ ಶಾಂತಕುಮಾರಸ್ವಾಮಿ ಹಿರೇಮಠ ಹೇಳಿದರು.
ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಜೆ.ಎನ್.ಆರ್.ಲಡ್ಡಾ ಕಾನೂನು ಮಹಾವಿದ್ಯಾಲಯ, ವಿಕಾಸ ಅಕಾಡೆಮಿ, ನೃಪತುಂಗ ಕಲಾ ಮತು ವಾಣಿಜ್ಯ ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ “ಮೂಲ ದಾಖಲೆಗಳು’ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿ ಇತ್ತೀಚೆಗೆ ಮೋಸ, ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆ, ಪ್ಲಾಟ್, ಜಮೀನು, ವಾಹನ, ಜನನ-ಮರಣ ಮುಂತಾದ ಮೂಲ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಇದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂದರು.
ಪತ್ರಕರ್ತ ಸಿದ್ಧಯ್ಯಸ್ವಾಮಿ ಆಡಕಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾನೂನಿನ ಮಾಹಿತಿ ಕೊರತೆ ಇದೆ. ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸಲು ಮತ್ತು ಕಾನೂನಿನ ಅಗತ್ಯ ಇರುವವರಿಗೆ ಜೆ.ಎನ್.ಆರ್.ಲಡ್ಡಾ ಕಾನೂನು ಮಹಾವಿದ್ಯಾಲಯದಲ್ಲಿ ಪ್ರತಿ ಗುರುವಾರ ಕಾನೂನು ಸಲಹೆ ಮತ್ತು ಆಪ್ತ ಸಮಾಲೋಚನೆ ಹಮ್ಮಿಕೊಂಡಿರುವದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ವಿಕಾಸ ಅಕಾಡೆಮಿ ಪ್ರಮುಖ ಮುರಿಗೆಪ್ಪ ಕೋಳಕೂರ, ನ್ಯಾಯವಾದಿ ಜಗದೇವಪ್ಪ ಭೀಮನಳ್ಳಿ, ರೆಡ್ ಕ್ರಾಸ್ ಘಟಕದ ಬಸವರಾಜ ಅಪ್ರಾಳ ವೇದಿಕೆಯಲ್ಲಿದ್ದರು. ವಿಕಾಸ ಅಕಾಡೆಮಿ ಪ್ರಮುಖ ವಿಶ್ವನಾಥ ಕೋರೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಶರಣಗೌಡ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಭೈರವನಾಥ ಬಿರಾದಾರ ನಿರೂಪಿಸಿ, ವಂದಿಸಿದರು.