ಪಿರಿಯಾಪಟ್ಟಣ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಯಲು ಮುಕ್ತ ಸಮಾಜವನ್ನು ನಿರ್ಮಿಸಲು ಶ್ರಮಿಸುತ್ತಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ತಾಪಂ ಸದಸ್ಯ ರಂಗಸ್ವಾಮಿ ಹೇಳೀದರು.
ತಾಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಹುಣಸವಾಡಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿ, ಸರ್ಕಾರಗಳು ಬಯಲು ಮುಕ್ತ ವಾತಾವರಣ ನಿರ್ಮಿಸಲು ಅನೇಕ ಯೋಜನೆಗಳ ಮೂಲಕ ಹಣಕಾಸಿನ ನೆರವು ನೀಡುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ ಕೊಳ್ಳಬೇಕು ಎಂದರು.
ಈ ಮೂಲಕ ಹರಡುವ ಅನೇಕ ಸಾಂಕ್ರಾಮಿಕ ರೋಗಗಳನ್ನು ಕೂಡ ತಡೆಗಟ್ಟಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಡೆಂ à, ಮಲೇರಿಯಾ ಸೇರಿದಂತೆ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಪಂಚಾಯತಿಯು ಸ್ವತ್ಛತೆಗೆ ಆದ್ಯತೆ ನೀಡಬೇಕು ಅಲ್ಲದೆ ಗ್ರಾಪಂ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುವಂತಾಗಬೇಕು ಆಗ ಮಾತ್ರ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಲು ಸಾಧ್ಯ ಎಂದು ತಿಳಿಸಿದರು.
ಆಲನಹಳ್ಳಿ ಗ್ರಾಮವು ತೀರ ಹಿಂದುಳಿದ ಗ್ರಾಮವಾಗಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಗ್ರಾಪಂನವರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಾಡಿಸಲು ಅವಕಾಶವಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್‌ಗೌಡ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಕೂಡ ಜನಸಾಮಾನ್ಯರು ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ಸಾಧ್ಯವಾದಷ್ಟು ಜನರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೂ ಕೂಡ 192 ಶೌಚಾಲಯಗಳ ನಿರ್ಮಾಣ ಬಾಕಿ ಇದೆ. ಆದ್ದರಿಂದ ಗ್ರಾಮಸ್ಥರು ಶೌಚಾಲಯಗಳ ನಿರ್ಮಾಣಕ್ಕೆ ಶೀಘ್ರ ಮುಂದಾಗಬೇಕು ಅ.2ರೊಳಗಾಗಿ ಅನುದಾನ ಫಲಾನುಭವಿ ಪಡೆಯ ಬಹುದಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಪಿ.ಸ್ವಾಮಿ, ಆರೋಗ್ಯ ಇಲಾಖೆಯ ನೋಡೆಲ್ ಅಧಿಕಾರಿ ವಿಶ್ವನಾಥ್, ಗ್ರಾಪಂ ಸದಸ್ಯ ಟಿ.ರಾಜು, ಎಂ.ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಗ್ರಾಪಂ ಕರ ವಸೂಲಿಗಾರರಾದ ರಮೇಶ್, ಮಂಜು, ಮುಖಂಡರುಗಳಾದ ಗಣೇಶ್, ಕೃಷ್ಣ, ಸ್ವಾಮಿ, ಗುರುವಪ್ಪ, ಯ.ರಾಜು, ಅಂಗನವಾಡಿ ಶಿಕ್ಷಕಿಯರಾದ ಲತಾಮಣಿ, ಅಂಜು, ಬಸವರಾಜು, ಡೇರಿ ಸ್ವಾಮಣ್ಣ ಇತರರು ಇದ್ದರು.