ಬಸವನಬಾಗೇವಾಡಿ: ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಸೂರು ಸಿಗಬೇಕು. ಆತನಿಗೆ ರಾಜ್ಯ ಸರಕಾರದ ಪ್ರತಿಯೊಂದು ಯೋಜನೆ ತಲುಪಬೇಕೆಂಬ ಮಹಾದಾಸೆಯೊಂದಿಗೆ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕರಿಹಳ್ಳ ಹಾಗೂ ಕೋಡಿಬಾಹಳ್ಳ ತಾಂಡಾಗಳಲ್ಲಿ ಗ್ರಾಮಸಭೆ ನಡೆಸಿ ನಂತರ ಮಾತನಾಡಿದ ಅವರು, ಲಂಬಾಣಿ ಜನಾಂಗದ ಜನರು ಹಿಂದಿನ ಕಾಲದಿಂದಲೂ ಕೂಡಾ ಊರ ಹೊರಗಡೆ ಇರುವ ಬಯಲು ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ಸರಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿದ್ದಿಲ್ಲ. ಅದಕ್ಕಾಗಿ ಆ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಬೇಕು ಎಂದು ಸರಕಾರ ಯೋಜನೆ ರೂಪಿಸದೆ ಎಂದರು.
ಈ ಹಿಂದೆ ನೀವು ವಾಸ ಮಾಡುತ್ತಿರುವ ಮನೆಗಳು ಬೇರೆ ಯಾರೋ ಜಾಗದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಿ ಜೀವನ ನಡೆಸುತ್ತಿದ್ದೀರಿ. ಆದರೆ ಇನ್ನು ಮುಂದೆ ನೀವು ವಾಸಿಸುವ ಮನೆಗಳು ನಿಮ್ಮದಾಗುವ ಕಾಲ ಸನ್ನಿಹಿತವಾಗಿವೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ವಾಸಿಸುವನೇ ಮನೆಯ ಒಡೆಯ ಎಂಬ ಯೋಜನೆ ಅಡಿಯಲ್ಲಿ ತಾವು ವಾಸಿಸುವ ಮನೆಗಳಿಗೆ ಹಕ್ಕು ಪತ್ರ ನೀಡಿ ಈ ತಾಂಡಾಗಳನ್ನು ಇನ್ನೂ ಮುಂದೆ ತಾಂಡಾ ಎಂದು ಕರೆಯದೆ ಅವುಗಳಿಗೆ ಕಲ್ಯಾಣ ನಗರ ಎಂದು ಹೆಸರು ನಾಮಕರಣ ಮಾಡಿ ಅಲ್ಲಿ ವಾಸಿಸುವ ಜನರಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಸಾರಿಗೆ, ಶಾಲೆ, ಅಂಗನವಾಡಿ, ಆಸ್ಪತ್ರೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳು ಇನ್ನೂ ಮುಂದೆ ಪಡೆಯಲು ಸಾಧ್ಯ ಎಂದು ಹೇಳಿದರು.
ಬಂಜಾರಾ ಸಮಾಜದ ನಾಯಕ ಹರಿಲಾಲ ನಾಯಕ ಮಾತನಾಡಿ, ರಾಜ್ಯದಲ್ಲೇ ಈ ಯೋಜನೆ ಬಂದ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಶಿವಾನಂದ ಪಾಟೀಲ ಅವರ ಕಾರ್ಯವೈಖರಿಯಿಂದ ಇಂದು ಜಾಲಿಹಳ್ಳ ಹಾಗೂ ಕರಿಹಳ್ಳ, ಕೋಡಿಬಾಹಳ್ಳ ತಾಂಡಾಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡುವ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಗುರಪ್ಪ ಲಮಾಣಿ, ಮುಕ್ತಸಾಬ ರಗಟಿ, ಗೇಮು ರಾಠೊಡ, ನೇಮು ರಾಠೊಡ, ಸುಶೀಲ ನಾಯಕ, ರಾಜು ಲಮಾಣಿ, ಮತ್ತಪ್ಪ ಕಾರಬಾರಿ, ನೀಲು ನಾಯಕ, ರವಿ ರಾಠೊಡ, ಸುರೇಶ ನಾಯಕ, ಕೃಷ್ಣಾ ನಾಯಕ, ಎ.ಎ. ಕಲಾದಗಿ. ಎ.ಎಚ್. ಮಣಿಕಬಾಯಿ, ಪಿ.ಎಸ್. ಹುಡೇದ ಸೇರಿದಂತೆ ಅನೇಕರು ಭಾಗವಹಿಸಿದ್ದರು.