ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನದ ದಿನ ಸಮೀಪಿಸುತ್ತಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ, ಬಿಜೆಪಿಯಿಂದ ಸ್ಪರ್ಧಿಸಿರುವ ಹಾಲಿ ಸಂಸದರು, ಹೊಸ ಅಭ್ಯರ್ಥಿಗಳು ಗೆದ್ದು ಸಂಸತ್ತಿನಲ್ಲಿ ಕೂರುವ ಕನಸಿನೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನು ಕೆಲ ಬಿಜೆಪಿ ರಾಜ್ಯ ನಾಯಕರು, ಹಿರಿಯ ಶಾಸಕರು, ಮಾಜಿ ಸಚಿವರು ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಪತನವಾದರೆ ಸಚಿವ ಗಾದಿ ಸಿಗುವ ಕನವರಿಕೆಯಲ್ಲಿದ್ದಾರಂತೆ.
ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಆಯ್ದ ಪದಾಧಿಕಾರಿ ಹುದ್ದೆಗಳು ಬದಲಾವಣೆಯಾಗುವ ಮಾತು ಕೇಳಿ ಬಂದಿದ್ದು, ಖಾಲಿಯಾಗದ ಹುದ್ದೆಗಳ ಮೇಲೆ ಈಗಿನಿಂದಲೇ ಕೆಲವರು ಕರ್ಚಿಫ್, ಟವೆಲ್ ಹಾಕಲಾರಂಭಿಸಿದ್ದಾರಂತೆ.
ಇನ್ನು ರಾಜ್ಯ ಬಿಜೆಪಿ ಘಟಕ ಸೇರಿದಂತೆ ನಾನಾ ಹಂತದ ಪದಾಧಿಕಾರಿಗಳ ಬದಲಾವಣೆಯೂ ನಡೆಯಲಿದ್ದು, ಆಯಕಟ್ಟಿನ ಸ್ಥಾನಗಳ ಮೇಲೆ ಕಣ್ಣಿಟ್ಟಿರುವವರು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನೇ ಕಾಯುತ್ತಾ ಕುಳಿತಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಚಿವರು, ಶಾಸಕರು ಗೆದ್ದರೆ ತೆರವಾಗುವ ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿಯುವ ಲೆಕ್ಕಾಚಾರದಲ್ಲಿರಂತೆ. ರಾಜಕೀಯ ನಾಯಕರಿಗೆ ಫಲಿತಾಂಶದ ಚಿಂತೆಯಾದರೆ, ಅಧಿಕಾರ ಇಲ್ಲದವರಿಗೆ ಸ್ಥಾನಮಾನದ ಚಿಂತೆಯಂತೆ.