Advertisement

ಪ್ರತಿಯೊಬ್ಬರೂ ವಿಶ್ವ ಪ್ರಜ್ಞೆ ಬೆಳೆಸಿಕೊಳ್ಳಿ; ಮುರುಘಾ ಶರಣರು

06:22 PM Jun 07, 2022 | Team Udayavani |

ಚಿತ್ರದುರ್ಗ: ಕೆಲವರು ಆಸ್ತಿ, ಹಣ ಹಂಚಿಕೊಂಡರೆ ವಿಚಾರವಂತರು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆಸ್ತಿ ಹಂಚಿಕೆಯಲ್ಲಿ ಜಗಳವಾಗುತ್ತದೆ. ಆದರೆ ವಿಚಾರ ಹಂಚಿಕೆಯಿಂದ ಜಗಳ ನಿವಾರಣೆ ಮಾಡುವ ಮಾರ್ಗವಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬಸವ ಕೇಂದ್ರದಲ್ಲಿ ಬೃಹನ್ಮಠ ಸಂಯುಕ್ತ ಪಪೂ ಕಾಲೇಜು ಸಹಯೋಗದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನವ ಲೋಕದಲ್ಲಿ ಗಹನವಾದ ಸಮಸ್ಯೆಗಳಿವೆ. ಎಲ್ಲ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜ ಸುಧಾರಕರು ಏನೆಲ್ಲ ಪರಿವರ್ತನೆ ಉಂಟು ಮಾಡಿದ್ದಾರೆ.

ಹಾಗಾಗಿ ಗುರುವಿನಲ್ಲಿ ಮತ್ತು ಶಿಷ್ಯನಲ್ಲಿ ಪ್ರಜ್ಞೆ ಇರಬೇಕು. ಗುರು ಎಂದರೆ ಪ್ರಜ್ಞೆಯ ಸಂಕೇತ. ಸೀಮಿತ ಪ್ರಜ್ಞೆಗೆ ಒಳಗಾಗಬಾರದು. ಚೌಕಟ್ಟು ಹಾಕಿಕೊಳ್ಳಬಾರದು. ಅದು ಮತೀಯ, ಜಾತಿಯ ಸಂಕುಚಿತ ಪ್ರಜ್ಞೆ ಎನ್ನಿಸಿಕೊಳ್ಳುತ್ತದೆ. ಮಾನವ ತನ್ನ ಪ್ರಯತ್ನದ ಹಾಗೂ ಅನುಭವದ ಮೂಲಕ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗಬೇಕೆಂದರು.

ಪ್ರಜ್ಞೆಯ ಬೆಳವಣಿಗೆ ವ್ಯಕ್ತಿತ್ವದ ಬೆಳವಣಿಗೆಯೂ ಆಗಿದೆ. ಅನೇಕರಿಗೆ ತಮ್ಮ ತಲೆಯಲ್ಲಿರುವ ಮಿದುಳಿಗೆ ಅಪ್ರತಿಮ ಶಕ್ತಿ ಇದೆ ಎಂದು ತಿಳಿಯುವುದಿಲ್ಲ. ಲೌಕಿಕ ಅಥವಾ ಭೌತಿಕವಾಗಿರುವ ಪ್ರಜ್ಞೆ ಇರಬಾರದು. ಯಾರಿಗೆ ವಸ್ತುಗಳ ಮೇಲಿನ ಮೋಹ ಹೆಚ್ಚಾಗಿರುತ್ತದೋ ಅವರದು ಭೌತಿಕ ಪ್ರಜ್ಞೆ. ಭೌತಿಕ ಪ್ರಜ್ಞೆಯಿಂದ ವಿಶ್ವ ಪ್ರಜ್ಞೆಯ ಕಡೆಗೆ ಬರುವ ಪ್ರಯತ್ನ ಮಾಡಬೇಕು. ವಿಶ್ವ ಪ್ರಜ್ಞೆ ಉಳ್ಳವರು ವಿಶ್ವ ಗುರುವಾಗುತ್ತಾರೆ. ಜಾತಿಯ ಒಳಗಿದ್ದು ಜಾತಿ ಮೀರುವವರು ವಿಶ್ವ ಗುರು, ವಿಶ್ವ
ಮಾನವರಾಗುತ್ತಾರೆ ಎಂದು ತಿಳಿಸಿದರು.

ದಾವಣಗೆರೆಯ ಸಹಾಯಕ ಪ್ರಾಧ್ಯಾಪಕಿ ಡಾ| ಅನಿತಾ ದೊಡ್ಡಗೌಡರ್‌ “ಗುರುತ್ವ-ವಿಶ್ವ ಮಾನವತ್ವ ಸಾಧ್ಯವೇ?’ ಎನ್ನುವ ವಿಷಯದ ಬಗ್ಗೆ ಮಾತನಾಡಿ, ಗುರುತ್ವ ಎಂದರೆ ಆಕರ್ಷಣಾ ಮೌಲ್ಯ. ಮಾನವನಿಗೆ ಗುರುತ್ವ ಬೇಕು. ಅದು ಮಾನವೀಯ ಮೌಲ್ಯ. ಅಂತಹ ಮೌಲ್ಯ ವಿಶ್ವಮಾನವತ್ವದೆಡೆಗೆ ಕೊಂಡೊಯ್ಯುತ್ತದೆ. ಮಗು ಹುಟ್ಟಿದಾಗ ಮನೆಯಲ್ಲಿ ಜಾತಿ, ಮತ ಎಂದು ಹೇಳುತ್ತ ಅವನಲ್ಲಿ ಅಲ್ಪ ಮಾನವತ್ವವನ್ನು ತುಂಬುತ್ತೇವೆ. ಬಸವಣ್ಣನವರ ಕಳಬೇಡ, ಕೊಲಬೇಡ ವಚನದಂತೆ ನಡೆದರೆ ಮಾನವರಾಗುತ್ತೇವೆ. ಈಗ ರಾಜಕೀಯ ಕಾಲ ಮುಗಿಯುತ್ತಿದೆ. ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಿದೆ. ಕಾರಣ ಮಕ್ಕಳಲ್ಲಿ ಆಧ್ಯಾತ್ಮದೆಡೆಗಿನ
ಒಲವು ಕಡಿಮೆಯಾಗುತ್ತಿದ್ದು, ಅವರನ್ನು ಮತ್ತೆ ಆಧ್ಯಾತ್ಮಿಕತೆಯತ್ತ ತರುವ ಕೆಲಸವಾಗಬೇಕಿದೆ. ಕುವೆಂಪು ಅವರ ಪಂಚಸೂತ್ರಗಳು ನಮಗೆ ಮುಖ್ಯವಾಗುತ್ತವೆ ಎಂದು ಹೇಳಿದರು.

Advertisement

ಮುಖ್ಯ ಅತಿಥಿಯಾಗಿದ್ದ ಎಂ.ಎಸ್‌. ಬಸವರಾಜಯ್ಯ ಮಾತನಾಡಿ, ವಿಶ್ವ ಗುರುವೆಂದು ಬಸವಣ್ಣನವರನ್ನು ಮಾತ್ರ ಕರೆಯುತ್ತಾರೆ. ಮನುಷ್ಯ ಆಸೆಯನ್ನು ಬಿಟ್ಟಾಗ ಮನುಷ್ಯನಾಗುತ್ತಾನೆ. ಇನ್ನೊಬ್ಬನಿಗೆ ಒಳಿತಾಗಲಿ ಎಂಬ ಆಸೆ ಇರಬೇಕು. ವಿವೇಕಾನಂದರು ಆಸೆ ಇಲ್ಲದೆ ಸಮಾಜಕ್ಕಾಗಿ ದುಡಿದರು. ಹಾಗಾಗಿ ವಿಶ್ವ ಮಾನವರಾದರು. ಮನುಷ್ಯ ಮನೆಗೆ ಮಾರಿ ಆದರೂ ಪರವಾಗಿಲ್ಲ, ಸೋಮಾರಿ ಆಗಬಾರದು ಎಂದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಬೃಹನ್ಮಠ ಸಂಯುಕ್ತ ಪಪೂ ಕಾಲೇಜು ಪ್ರಾಚಾರ್ಯ ಎಸ್‌. ಷಡಾಕ್ಷರಯ್ಯ ಸ್ವಾಗತಿಸಿದರು. ರಾಜೇಶ್‌ ನಿರೂಪಿಸಿದರು.

ಮಕ್ಕಳಲ್ಲಿ ಮಾನವೀಯ ಮೌಲ್ಯ ರೂಢಿಸಿ
ಮತದಿಂದ ಗುಂಪು ಕಟ್ಟುವ ಕೆಲಸವಾಗಬಾರದು. ನಮ್ಮಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ. ಯಾವ ಗ್ರಂಥವೂ ಪರಮಪೂಜ್ಯ ಗ್ರಂಥವಾಗಬಾರದು. ಏಕೆಂದರೆ ಎಲ್ಲ ಧರ್ಮ ಗ್ರಂಥಗಳೂ ಒಂದೇ ಆಗಿವೆ. ಮಗುವನ್ನು ಭಾಷೆ, ಧರ್ಮ, ಮತದಿಂದ ಹೊರತರಬೇಕು. ಅಂದಾಗ ಮಾತ್ರ ಅವನಲ್ಲಿ ಗುರುತ್ವ ಶಕ್ತಿ ಅನಾವರಣಗೊಳ್ಳುತ್ತದೆ. ಮಾನವನಲ್ಲಿ ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗಬೇಕು. ಆಗ ಮಕ್ಕಳು ವಿಶ್ವ ಮಾನವರಾಗಲು ಅವಕಾಶ ಸಿಗುತ್ತದೆ
ಎಂದು ದಾವಣಗೆರೆಯ ಸಹಾಯಕ ಪ್ರಾಧ್ಯಾಪಕಿ ಡಾ| ಅನಿತಾ ದೊಡ್ಡಗೌಡರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next