Advertisement

ನೀರಿನ ಮಹತ್ವವನ್ನು ಎಲ್ಲರೂ ಮನಗಾಣಿ

09:15 PM May 11, 2019 | Team Udayavani |

ಚಾಮರಾಜನಗರ: ಪ್ರತಿಯೊಬ್ಬರೂ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಿದ್ದರೆ ಮಹರ್ಷಿ ಭಗೀರಥರ ಪ್ರಯತ್ನ ಅನುಸರಿಸಿದರೆ ತಕ್ಕ ಫ‌ಲಿತಾಂಶ ಸಿಗಲಿದೆ. ಭಗೀರಥರ ಪ್ರಯತ್ನಕ್ಕೆ ಅಷ್ಟೊಂದು ಮಹತ್ವವಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ಭಗೀರಥರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹರ್ಷಿ ಭಗೀರಥರು ಅನ್ನ ಆಹಾರಗಳನ್ನು ತ್ಯಜಿಸಿ, ಸುದೀರ್ಘ‌ ಕಾಲ ತಪಸ್ಸು ಮಾಡಿ ಭೂಮಿಯನ್ನು ಪವಿತ್ರಗೊಳಿಸಲು ಎಷ್ಟೇ ಅಡೆ ತಡೆ ಎದುರಾದರು ಸಹ ಛಲಬಿಡದೇ ಗಂಗೆಯನ್ನು ಭೂಮಿಗೆ ಕರೆತಂದ ಮಹಾಪುರುಷರಾಗಿದ್ದಾರೆ. ಅವರ ಪ್ರಯತ್ನಕ್ಕೆ ಎಲ್ಲರೂ ತಲೆಬಾಗಬೇಕು ಎಂದರು.

ನೀರಿನ ಮಹತ್ವ: ಕಥೆ, ಪುರಾಣಗಳಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಭಗೀರಥ ಮಹರ್ಷಿ ಗಂಗೆಯನ್ನು ಭೂಮಿಗೆ ತಂದರು. ಗಂಗೆ ಎಂದರೆ ನೀರು. ಮನುಷ್ಯನಿಗೆ ಅ ನೀರಿನ ಮೌಲ್ಯವನ್ನು ತಿಳಿದಿದ್ದರೂ ಸಹ ಇಂದು ನೀರನ್ನು ಎಲ್ಲೆಡೆ ಕಲುಷಿತಗೊಳಿಸುತ್ತಿರುವುದು ದುರಂತವಾಗಿದೆ. ಅಲ್ಲದೇ ನೀರನ್ನು ಅಪವ್ಯಯ ಮಾಡಲಾಗುತ್ತಿದೆ. ನೀರಿನ ಮಹತ್ವವನ್ನು ಎಲ್ಲರೂ ಮನಗಾಣಲೇಬೇಕು. ಅದನ್ನು ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಭಗೀರಥರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರು ಎಲ್ಲ ಸಮುದಾಯಗಳ ಒಳಿತನ್ನು ಬಯಸಿ ಗಂಗೆಯನ್ನು ಧರೆಗೆ ತಂದವರು. ಸಮುದಾಯವು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆದು ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

Advertisement

ಸದ್ಗುಣ ಅನುಸರಿಸಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿ, ಭಾರತದಲ್ಲಿ ಅನೇಕ ಮಹಾಪುರುಷರು ಬಂದು ಹೋಗಿದ್ದಾರೆ. ಅವರೆಲ್ಲರ ಸಾಧನೆ, ಜೀವನ ಗಾಥೆ ಮೌಲ್ಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಯಾವುದೇ ವ್ಯಕ್ತಿಯು ತನ್ನ ಗುರಿ ಮುಟ್ಟಲು ಸಾಧನೆ ಭಗೀರಥರ ತ್ಯಾಗ, ಛಲ, ಸದ್ಗುಣಗಳನ್ನು ಅನುಸರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಮಾತನಾಡಿ, ಮಹರ್ಷಿ ಭಗೀರಥರ ಪ್ರಯತ್ನ, ಸಾಧನೆಗಳಿಗೆ ವಿಶಿಷ್ಟ ಸ್ಥಾನವಿದೆ. ಪ್ರತಿಯೊಬ್ಬರು ಅವರವರ ಕ್ಷೇತ್ರದಲ್ಲಿ ಪರಿಶ್ರಮ ಪಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌. ಚೆನ್ನಪ್ಪ ಅವರು ಭಗೀರಥ ಜಯಂತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್‌ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next