ವಿಜಯಪುರ: ಸರ್ವರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರಯಲಾಗುತ್ತಿದೆ ಎಂದು ಜಿಲ್ಲಾ ಎಸ್‌ಕೆಡಿಆರ್‌ಪಿ ನಿರ್ದೇಶಕ ವಸಂತ ಸಾಲಿಯಾನಾ ತಿಳಿಸಿದರು.
ಪಟ್ಟಣದ ದುರ್ಗಾತಾಯಿ ದೇವಾಲಯ ವಾರ್ಡಿನಲ್ಲಿ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪುರಸಭಾ ಆಡಳಿತದ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ವಿವಿಧೆಡೆ ಸುಮಾರು 200 ಕಡೆಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ಥಳೀಯ ಗ್ರಾಪಂ, ಪುರಸಭೆ, ನಗರ ಪಾಲಿಕೆಗಳು ಜಂಟಿಯಾಗಿ ಶುದ್ಧನೀರಿನ ಘಟಕಗಳನ್ನು ತೆರದು ನಿರ್ವಹಣೆ ಮಾಡಲಾಗುತ್ತಿದೆ.
ಘಟಕದಿಂದ ಪ್ರತಿಯೊಬ್ಬರಿಗೆ 20 ಲೀ. ನೀರನ್ನು ಕಡಿಮೆ ದರದಲ್ಲಿ ವಿತರಿಸಲಾಗುತ್ತಿದೆ. ಘಟಕದ ನಿರ್ವಹಣೆಗೆ ಎಸ್‌ಕೆಡಿಆರ್‌ಪಿಯು ಪ್ರೇರಕರನ್ನು ನೇಮಿಸಿದ್ದು, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಿರ್ವಹಣಾ ವೆಚ್ಚವನ್ನು ಭರಿಸಲಾಗುತ್ತಿದೆ. ತಾಲೂಕಿನಲ್ಲಿ 9 ಘಟಕಗಳನ್ನು ತೆರೆಯಲಾಗಿದ್ದು, ವಿಜಯಪುರ ಪಟ್ಟಣದಲ್ಲಿ 3, ದೇವನಹಳ್ಳಿಯಲ್ಲಿ 6 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಯೋಜನೆ ಯಶಸ್ವಿಯಾಗಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ಬಯಲು ಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು 2 ಸಾವಿರ ಅಡಿಗಳಷ್ಟು ಕೊಳವೆ ಬಾವಿ ಕೊರೆದರೂ ನೀರಿನ ಲಭ್ಯತೆ ಇಲ್ಲವಾಗಿದೆ. ಅಷ್ಟು ಆಳದಿಂದ ನೀರು ಮೇಲೆತ್ತಿದರೂ ಕುಡಿಯಲು ಯೋಗ್ಯವಾಗಿರದೇ ಲವಣಾಂಶಯುತವಾಗಿದೆ. ಎಲ್ಲರೂ ಶುದ್ಧ ಕುಡಿಯುವ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು ಎಂದರು.
ಪುರಸಭಾ ಮಾಜಿ ಸದಸ್ಯ ಎಸ್.ಭಾಸ್ಕರ್, ಮುಬಾರಕ್, ವಿ.ಎಂ.ನಾಗರಾಜು, ಎಚ್.ಎಂ.ಕೃಷ್ಣಪ್ಪ, ತಾಲೂಕು ಎಸ್‌ಕೆಡಿಆರ್‌ಪಿ ಸಂಯೋಜಕಿ ಅಕ್ಷತಾರೈ, ಮನೋಹರಮ್ಮ, ಪ್ರಕಾಶ್, ಭುಜೇಂದ್ರಪ್ಪ, ಮಹೇಶ್, ಮುನಿರಾಜು, ಬೈರೇಗೌಡ, ಮತ್ತಿತರರಿದ್ದರು.