ಬೆಂಗಳೂರು: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಇನ್ನು ಮುಂದೆ ಪ್ರತಿ ಮಂಗಳವಾರ ಹಳ್ಳಿಯ ಗ್ರಾಮ ಪಂಚಾಯತ್ ಕಚೇರಿಯಿಂದ ಹಿಡಿದು ಶಕ್ತಿ ಕೇಂದ್ರ ವಿಧಾನಸೌಧದ ಮುಖ್ಯ ಕಾರ್ಯ ದರ್ಶಿ ಕಚೇರಿವರೆಗೆ ಕಡ್ಡಾಯವಾಗಿ “ಜನಸ್ಪಂದನ ದಿನ’ ನಡೆಯಲಿದೆ. ಈ ವೇಳೆಯಲ್ಲಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಖುದ್ದಾಗಿ ಹಾಜರಿದ್ದು ಸಾರ್ವಜನಿಕರ ಕುಂದು ಕೊರತೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಲಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಮುಖ್ಯಮಂತ್ರಿ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಜನಸ್ಪಂದನ ದಿನ ನಡೆಸಲು ತೀರ್ಮಾ ನಿಸಲಾಗಿದೆ ಎಂದರು.
ಜನಸ್ಪಂದನ ದಿನದಂದು ಗ್ರಾಮ ಪಂಚಾಯತ್ ಪಿಡಿಒ, ಕಾರ್ಯ ದರ್ಶಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯದರ್ಶಿಯವರು ತಮ್ಮ ಕಚೇರಿ ಗಳಲ್ಲಿ ಕಡ್ಡಾಯವಾಗಿ ಲಭ್ಯವಿದ್ದು, ಸಾರ್ವಜನಿಕರ ದೂರು-ಅಹವಾಲು ಸ್ವೀಕರಿಸಿ ಅದಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಮಂಗಳವಾರ ಅಧಿಕಾರಿಗಳಿಗೆ ಪೂರ್ವನಿಗದಿತ ಸಭೆ, ಕಾರ್ಯ ಕ್ರಮಗಳಿದ್ದರೆ ಅದನ್ನು ರದ್ದುಪಡಿಸಬೇಕೆಂದು ಮುಖ್ಯ ಕಾರ್ಯದರ್ಶಿಯವರು ತಿಳಿಸಿದರು.
ಈಗಾಗಲೇ ಎಲ್ಲ ಸರಕಾರಿ ಕಚೇರಿಗಳಲ್ಲಿ ಅಪರಾಹ್ನ 3ರಿಂದ 5ರ ವರೆಗಿನ ಸಮಯ ಸಾರ್ವ ಜನಿಕರಿಗೆಂದು ಮೀಸಲಿದೆ. ಈ ವ್ಯವಸ್ಥೆ ಅದೇ ರೀತಿಯಲ್ಲಿ ಮುಂದುವರಿಯಲಿದೆ. ಆದರೆ ಪ್ರತಿ ದಿನ ಸಾರ್ವಜನಿಕರಿಗೆ ಮೀಸಲಿಟ್ಟ ಸಮಯದಲ್ಲಿ ಅನೇಕ ಬಾರಿ ಅಧಿಕಾರಿಗಳು ತಮ್ಮ ಪೂರ್ವನಿಗದಿತ ಸಭೆ, ಕಾರ್ಯಕ್ರಮಗಳಿಂದಾಗಿ ಸಾರ್ವಜನಿಕರಿಗೆ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ. ವಾರದ ಎಲ್ಲ ಕೆಲಸದ ದಿನಗಳಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವಿರುತ್ತದೆ ಎಂದರು.