Advertisement

ಬದುಕಿನ ಪ್ರತಿ ಸಮಸ್ಯೆಗೂ ವಿಜ್ಞಾನದಲ್ಲಿದೆ ಪರಿಹಾರ; ಕೆ.ಎಸ್‌. ಗುರುಮಠ

06:19 PM Mar 02, 2023 | Team Udayavani |

ಕಾರಟಗಿ: ವಿಜ್ಞಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ದೇಶದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಲು ಪ್ರತಿವರ್ಷ ಫೆ. 28ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದು ಕಮ್ಮಾವಾರಿ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಕೆ.ಎಸ್‌. ಗುರುಮಠ ಹೇಳಿದರು.

Advertisement

ತಾಲೂಕಿನ ಮರ್ಲಾನಹಳ್ಳಿಯ ನವನಗರದ ರಡ್ಡಿ ವೀರಣ ಸಂಜೀವಪ್ಪ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ವಿಜ್ಞಾನ ದಿನವು ಭಾರತದಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಫೆ. 28ರಂದು ಭಾರತೀಯ ಭೌತಶಾಸ್ತ್ರಜ್ಞ ಸರ್‌| ಸಿ.ವಿ. ರಾಮನ್‌ ಅವರು 1928ರ ಫೆ. 28ರಂದು ರಾಮನ್‌ ಪರಿಣಾಮದ ಅವಿಷ್ಕಾರವನ್ನು ಗುರುತಿಸಲು ಆಚರಿಸಲಾಗುತ್ತದೆ.

ಬದುಕಿನ ಪ್ರತಿ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ. ಆದ್ದರಿಂದ ಮಕ್ಕಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಗಣಿತ ಮತ್ತು ವಿಜ್ಞಾನಗಳ ಬಗ್ಗೆ ಒಲವು ಮೂಡಿಸಬೇಕು. ವಿದ್ಯಾರ್ಥಿಗಳು ಏನನ್ನೇ ಕಲಿತರು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು. ಜೊತೆಗೆ ವಿಜ್ಞಾನವು ನಮ್ಮ ಸಂಸ್ಕೃತಿ ಮತ್ತು ಧರ್ಮಗಳ ಭಾಗವಾಗಬೇಕು.ತಂತ್ರಜ್ಞಾನದ ಮೇಲಿನ ಅವಲಂಬನೆ ಇಂದಿನ ಅನಿವಾರ್ಯ.

ಇಂದಿನ ಮಕ್ಕಳನ್ನು ಭಿನ್ನವಾಗಿ ರೂಪಿಸುತ್ತಿರುವುದು ಆನ್‌ಲೈನ್‌ ಸಂಪನ್ಮೂಲಗಳು. ವಿಜ್ಞಾನ, ತಂತ್ರಜ್ಞಾನ ಹಾಗೂ ಅನ್ವೇಷಣೆಯ ಭವಿಷ್ಯ ವಿದ್ಯಾಭ್ಯಾಸದ ಕೌಶಲಗಳು ಹಾಗೂ ವೃತ್ತಿಯ ಮೇಲಿನ ಪರಿಣಾಮಗಳು ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ ಎಂದರು.

ಶಿಕ್ಷಕ ಗುರುರಾಜ ಜೋಶಿ ಮಾತನಾಡಿ, ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ ಎಂಬ ವಿಷಯವು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ವಿಶ್ವಾದ್ಯಂತ ಯೋಗಕ್ಷೇಮ ಉತ್ತೇಜಿಸುವಲ್ಲಿ ವಿಜ್ಞಾನದ ಪ್ರಾಮುಖ್ಯತೆ ಪ್ರತಿಬಿಂಬಿಸುತ್ತದೆ. ಭೌತಶಾಸ್ತ್ರಜ್ಞ ಚಂದ್ರಶೇಖರ ವೆಂಕಟರಾಮನ್‌ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರದಲ್ಲಿ ಒಂದು ಪ್ರಮುಖ ಅವಿಷ್ಕಾರ ಮಾಡಿದರು. ಅದನ್ನ ರಾಮನ್‌ ಎಫೆಕ್ಟ್ ಎಂದು ಹೆಸರಿಸಲಾಯಿತು. ಸಮಾಜದ ಅಭಿವೃದ್ಧಿಗೆ ವಿಜ್ಞಾನ ಬಳಕೆಯಾಗಬೇಕು. ಈ ದಿನವನ್ನು ದೇಶದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಲು ನೆನೆಯಲು ಆಚರಿಸಲಾಗುತ್ತದೆ ಎಂದರು.ವಿದ್ಯಾರ್ಥಿನಿ ಮಂಜೀರಾ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು, ಶಿಕ್ಷಕಿಯರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next