Advertisement

ಶಿಕ್ಷಕರ ಸಮಸ್ಯೆ ಬಗೆಹರಿಸಲು ಬದ್ಧ : ಸಚಿವ ಬಿ.ಸಿ. ನಾಗೇಶ್‌

04:53 PM Mar 20, 2022 | Team Udayavani |

ಅಂಕೋಲಾ: ಮುಂದಿನ ದಿನದಲ್ಲಿ ಶಿಕ್ಷಕರು ತಮ್ಮ ಹಕ್ಕಗಳನ್ನು ಪಡೆಯಲು ಡಿಡಿಪಿಐ ಮತ್ತು ಬಿಇಒ ಕಚೇರಿಗೆ ಅಲೆದಾಡಿ ಕಷ್ಟ ಪಡಬೇಕಿಲ್ಲ. ಸರಕಾರ ನಿಮ್ಮ ಹಕ್ಕು ನಿಮ್ಮ ಮನೆ ಬಾಗಿಲಲ್ಲೇ ಸಿಗುವ ಹಾಗೆ ಯೋಜನೆ ರೂಪಿಸುವ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

Advertisement

ಅವ್ವಾ ಸೇವಾ ಟ್ರಸ್ಟ್‌ ಹುಬ್ಬಳ್ಳಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಾರವಾರ ಮತ್ತು ಅಂಕೋಲಾ ಘಟಕ, ಉ.ಕ. ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಜಿಲ್ಲಾಮಟ್ಟದ ಶಿಕ್ಷಕಿಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿತ್ರಿಬಾಯಿ ಫುಲೆ ಭಾರತದ ಮಹಿಳೆಯರನ್ನು ಶಿಕ್ಷಣದ ಮೂಲಕ ಸ್ವಾವಲಂಬಿಗಳಾಗುವಂತೆ ಮಾಡಿದ ಮಹಾಮಾತೆ. ಇತಿಹಾಸದಲ್ಲಿ ಅಖಂಡ ಭಾರತದ ಮೇಲೆ ಸಾವಿರಾರು ಬಾರಿ ಆಕ್ರಮಣ ನಡೆದರೂ ಕೂಡ ದೇಶದ ಸಂಸ್ಕೃತಿ ಬದಲಾಗಲಿಲ್ಲ. ಅಂತಹ ಗಟ್ಟಿ ಸಂಸ್ಕೃತಿಯುಳ್ಳ ದೇಶದಲ್ಲಿ ನೂತನ ಶಿಕ್ಷಣ ನೀತಿಯನ್ನು ತರಲಾಗುತ್ತಿದೆ. ಇದರ ಬಗ್ಗೆ ಸೂಕ್ತ ತಿಳುವಳಿಕೆ ಮೂಡಬೇಕಾಗಿದೆ. ಶೈಕ್ಷಣಿಕ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ನೂತನ ಶಿಕ್ಷಣ ನೀತಿಯನ್ನು ತರುವಾಗ ಕೇವಲ ವಿದ್ಯಾರ್ಥಿಗಳನ್ನಷ್ಟೆ ಪರಿಗಣಿಸದೆ ಶಿಕ್ಷಕರನ್ನೂ ಗಮನದಲ್ಲಿಟ್ಟುಕೊಂಡು ಜಾರಿಗೆ ತರಬೇಕಿದೆ. ಶಿಕ್ಷಕರಿಗೆ ಹಲವಾರು ಸಮಸ್ಯೆಗಳಿವೆ. ಮಾನಸಿಕವಾಗಿ ನೆಮ್ಮದಿ ಇದ್ದರೆ ಶಿಕ್ಷಕರು ಉತ್ತಮವಾಗಿ ಪಾಠ ಮಾಡ್ತಾರೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯತ್ಯಾಸ ಮಾಡದೆ ಅನುದಾನಿತ ಶಾಲೆಗೂ ಸಮನಾದ ಪ್ರಾತಿನಿಧ್ಯ ನೀಡಬೇಕು. ಅಲ್ಲದೆ ಕೊಟ್ಟ ಶಾಲೆಗೇ ಅನುದಾನ ನೀಡದೆ ಹೊಸ ಶಾಲೆಗಳಿಗೂ ಸಹ ಅನುದಾನ ನೀಡಬೇಕು. ಶಾಲೆಗೆ ಹೊಸ ಕಟ್ಟಡ ನೀಡಿದರಷ್ಟೇ ಆಗುವದಿಲ್ಲ. ಶಾಲೆಗೆ ಬೇಕಾಗುವ ಪರಿಕರಗಳನ್ನೂ ನೀಡಬೇಕು. ಶಿಕ್ಷಕರ ಪರವಾಗಿ ತಾವು ಈ ಬೇಡಿಕೆಯನ್ನು ಮುಂದಿಟ್ಟಿದ್ದು, ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸುವ ವಿಶ್ವಾಸವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಿಇಒ ಕಚೇರಿ ಮತ್ತು ಡಿಡಿಪಿಐ ಕಚೇರಿಗೆ ಅಲೆಯುವದು ಸಾಮಾನ್ಯವಾಗಿ ಕಾಣುತ್ತೇವೆ. ಮುಂದೆ ಈ ತರಹ ಅಲೆದಾಟವಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಶಾಸಕಿ ರೂಪಾಲಿ ನಾಯ್ಕ ಶಿಕ್ಷಕರ ಪರ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಶಾಸಕಿ ಇದನ್ನು ಅಧಿ ವೇಶನದಲ್ಲಿ ಪ್ರಸ್ತಾಪ ಮಾಡಿದರೆ ಖಂಡಿತ ಬೆಂಬಲಿಸುವೆ ಎಂದರು.

Advertisement

ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ರೂಪಾಲಿ ನಾಯ್ಕ, ಎಸ್‌.ಆರ್‌. ಮನವಳ್ಳಿ ಸೇರಿದಂತೆ ತಾಲೂಕಿನ ನಿವೃತ್ತ ಶಿಕ್ಷಕರನ್ನು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌.ಎಸ್‌. ಎಲ್‌.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಧಾರವಾಡದ ಅಪರ ಆಯುಕ್ತರ ಕಚೇರಿಯ ವಿಶ್ರಾಂತ ನಿರ್ದೇಶಕ ಎಸ್‌.ಆರ್‌. ಮನಹಳ್ಳಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಕುರಿತು ಉಪನ್ಯಾಸ ನೀಡಿದರು. ಸೀಮಾ ಭಟ್‌ ಸಾವಿತ್ರಿಬಾಯಿ ಫುಲೆ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು.

ಧಾರವಾಡದ ಅಪರ ಆಯುಕ್ತ ಎಸ್‌.ಎಸ್‌. ಬಿರಾದಾರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಹರೀಶ ಗಾಂವಕರ, ಕುಮಟಾ ಡಯಟ್‌ ಪ್ರಾಚಾರ್ಯ ಈಶ್ವರ ನಾಯ್ಕ, ರಾಜ್ಯ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಎನ್‌. ಚಂದ್ರೇಗೌಡ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಭಟ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್‌, ಕ.ರಾ.ಮಾ.ಶಾ.ನೌ. ಸಂಘ ಶಿರಸಿ ಶೈಕ್ಷಣಿಕ ಜಿಲ್ಲೆ ಅಧ್ಯಕ್ಷ ನಾರಾಯಣ ದೈಮನೆ ಉಪಸ್ಥಿತರಿದ್ದರು. ಲೀನಾ ಸಂಗಡಿಗರು ಪ್ರಾರ್ಥಿಸಿದರು. ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ ಸ್ವಾಗತಿಸಿದರು. ಎಲ್‌.ಎನ್‌.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಗಣಪತಿ ನಾಯಕ ವಂದಿಸಿದರು. ಜಿ.ಆರ್‌.ತಾಂಡೇಲ, ಗಣೇಶ ಭಟ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next