Advertisement

ಸಾಂಸ್ಕೃತಿಕ ನಗರಿಯಲ್ಲಿ ಸಂಜೆ ಮಳೆಯಬ್ಬರ

01:24 PM Jun 03, 2018 | Team Udayavani |

ಮೈಸೂರು: ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಕೆಲವು ದಿನಗಳಿಂದ ಸಂಜೆ ವೇಳೆಯಲ್ಲಿ ಸುರಿಯುತ್ತಿದ್ದ ಮಳೆರಾಯನ ಆರ್ಭಟ ಕಳೆದೆರಡು ದಿನಗಳಿಂದ ತಣ್ಣಗಾಗಿತ್ತು.

Advertisement

ಆದರೆ ಶನಿವಾರ ಸಂಜೆ ಸುರಿದ ಮಳೆಯ ಅಬ್ಬರಕ್ಕೆ ಸಾಂಸ್ಕೃತಿಕ ನಗರಿಯ ಜನತೆ ತತ್ತರಿಸಿದರು. ನಗರದಲ್ಲಿ ಬೆಳಗ್ಗಿನಿಂದಲೂ ಬಿಸಿಲಿನ ತಾಪಮಾನ ಹೆಚ್ಚಾಗಿತ್ತಾದರೂ, ಮಧ್ಯಾಹ್ನ 3 ಗಂಟೆ ನಂತರ ಮೋಡ ಕವಿದ ವಾತಾವರಣದಿಂದಾಗಿ ಸ್ವಲ್ಪಮಟ್ಟಿಗೆ ತಂಪಾದ ವಾತಾವರಣವಿತ್ತು. ಆದರೆ ಸಂಜೆ 4.30ರ ವೇಳೆಗೆ ಶುರುವಾದ ವರುಣನ ಆರ್ಭಟಕ್ಕೆ ನಗರದ ಜನತೆ ತೊಂದರೆ ಅನುಭವಿಸಬೇಕಾಯಿತು. 

ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಮಳೆ ನೀರು ಹೊರ ಹಾಕಲು ಅಂಗಡಿ ಮಾಲಿಕರು ಹಾಗೂ ಸಿಬ್ಬಂದಿ ಸಾಕಷ್ಟು ಪರದಾಡಿದರು. ಇನ್ನೂ ಮಳೆ ನೀರಿನಲ್ಲಿ ಮುಳುಗಿದ ಬೈಕ್‌ ಎತ್ತಲು ಬೈಕ್‌ ಸವಾರರು ಹರಸಾಹಸಪಡಬೇಕಾಯಿತು. ಅಲ್ಲದೆ ನಗರದ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. 

ರಸ್ತೆಗಳು ಜಲಾವೃತ: ಸತತ ಒಂದೂವರೆ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿತು. ಪ್ರಮುಖವಾಗಿ ದೊಡ್ಡಗಡಿಯಾರ ವೃತ್ತ, ಚಾಮರಾಜ ಜೋಡಿ ರಸ್ತೆ, ಅಗ್ರಹಾರದ ಎಂ.ಜಿ.ರಸ್ತೆ, ಜೆಎಸ್‌ಎಸ್‌ ಆಸ್ಪತ್ರೆ ಮುಂಭಾಗದ ರಸ್ತೆ, ವಾಲ್ಮೀಕಿ ರಸ್ತೆ,

ಲಿಡೋ ಚಿತ್ರಮಂದಿರ ಸಮೀಪದ ಬಿ.ಎನ್‌. ರಸ್ತೆ, ಅಶೋಕರಸ್ತೆ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ಸಾಕಷ್ಟು ತೊಂದರೆ ಉಂಟಾಗಿತ್ತು. ಮಳೆಯಿಂದಾಗಿ ರಸ್ತೆಗಳು ಜಲಾವೃತ್ತಗೊಂಡಿದ್ದರಿಂದಾಗಿ ಈ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ, ವಾಹನ ಸವಾರರು ಹೈರಾಣಾದರು. 

Advertisement

ತಗ್ಗು ಪ್ರದೇಶಗಳಿಗೆ ನೀರು: ನಗರದಲ್ಲಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು. ಮೇದರ್‌ ಬ್ಲಾಕ್‌, ರಾಮಾನುಜ ರಸ್ತೆಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನುಗ್ಗಿದ ಪರಿಣಾಮ ಎಲ್ಲಾ ಮನೆಗಳು ಜಲಾವೃತಗೊಂಡಿತ್ತು. ಈ ವೇಳೆ ಸ್ಥಳೀಯ ನಿವಾಸಿಗಳು ಮಳೆಯನ್ನು ಲೆಕ್ಕಿಸದೆ ಮನೆಯಿಂದ ನೀರನ್ನು ಹೊರಹಾಕಲು ಪರಾದಾಡಿದರು. 

ನಗರ ಪಾಲಿಕೆಗೆ ಹಲವಾರು ಬಾರಿ ಮನವಿ ನೀಡಿ ಮಳೆ ನೀರು ಚರಂಡಿಯಲ್ಲಿ ಹರಿದುಹೋಗುವಂತೆ ವ್ಯವಸ್ಥೆಗೊಳಿಸಿ ಎಂದರೂ ಪಾಲಿಕೆ ಇತ್ತ ಗಮನ ಹರಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪಾಲಿಕೆ ಸದಸ್ಯ ಸುನೀಲ್‌ ಅವರನ್ನು ತರಾಟೆಗೆ ತೆಗೆದುಕೊಂಡ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next