Advertisement

ಮಹಿಳೆಯರಲ್ಲೂ ಇರಲಿ ಉಳಿತಾಯದ ಯೋಚನೆ

12:18 AM Jun 03, 2019 | Suhan S |

ಸಂಪಾದನೆ ಗಂಡನ ಜವಾಬ್ದಾರಿ, ತಾನು ಮನೆ ಹಾಗೂ ಮಕ್ಕಳನ್ನು ನೋಡಿಕೊಂಡಿದ್ದರೆ ಸಾಕು ಎನ್ನುವ ಕಾಲ ಇದಲ್ಲ. ಎಲ್ಲವನ್ನೂ ದುಡ್ಡು ಕೊಟ್ಟೇ ಕೊಳ್ಳಬೇಕಾದ ಈ ದಿನಗಳಲ್ಲಿ ಪುರುಷನಿಗೆ ಸಮನಾಗಿ, ಕೆಲವೊಮ್ಮೆ ಒಂದು ತೂಕ ಜಾಸ್ತಿಯೇ ದುಡಿಯುವ ಅನಿವಾರ್ಯತೆ ಮಹಿಳೆಯರ ಮುಂದಿದೆ.

Advertisement

ಕೇಂದ್ರ ಹಣಕಾಸು ಸಚಿವರಾಗಿ ಮಹಿಳೆಯೊಬ್ಬರು 48 ವರ್ಷಗಳ ಬಳಿಕ ಜವಾಬ್ದಾರಿ ವಹಿಸಿಕೊಂಡಿದ್ದು ಶುಭ ಸಂಕೇತ. ಕಳೆದ ಅವಧಿಯಲ್ಲಿ ದೇಶದ ರಕ್ಷಣೆಯ ಭಾರವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ನಿರ್ಮಲಾ ಸೀತಾರಾಮನ್‌ ಈಗ ಲೆಕ್ಕದ ಪುಸ್ತಕ ಕೈಗೆ ತೆಗೆದುಕೊಂಡಿದ್ದಾರೆ.

ಕುಟುಂಬದ ಆರ್ಥಿಕ ವಿಚಾರಗಳಲ್ಲಿ ಮಹಿಳೆಯರ ಭಾಗೀದಾರಿಕೆ ಇತ್ತೀಚಿನ ವರ್ಷಗಳಲ್ಲಿ ಹಲವು ಪಟ್ಟು ಹೆಚ್ಚಾಗಿದೆ. ದುಡಿದು ಆರ್ಥಿಕ ಸ್ವಾವಲಂಬನೆ ಸಾಧಿಸುವ ಜತೆಗೆ ಕುಟುಂಬ ಪೋಷಣೆಯಲ್ಲಿ ತಂದೆಗೋ ಗಂಡನಿಗೋ ಹೆಗಲು ಕೊಡುತ್ತಿದ್ದಾರೆ. ನೀರೆಯರೇ ಸಂಸಾರದ ನೊಗ ಹೊತ್ತಿರುವ ಅಸಂಖ್ಯಾತ ನಿದರ್ಶನಗಳೂ ನಮ್ಮ ಮುಂದಿವೆ.

ದುಡಿಯಲು ಇದೊಂದೇ ಕಾರಣವೇ? ಭವಿಷ್ಯ, ನಿವೃತ್ತಿಯ ಬದುಕು ನಮ್ಮ ಕಣ್ಣ ಮುಂದಿಲ್ಲವೇ? ಈಗೇನೋ ಕೈಯಲ್ಲಿ ದುಡ್ಡಿದೆ. ಬಯಸಿದ್ದನ್ನೆಲ್ಲ ಕೊಳ್ಳುತ್ತೇವೆ. ಮುಂದೆ ಹೇಗೆ? ಕಾಯಿಲೆ ಬಿದ್ದಾಗ ಚಿಕಿತ್ಸೆಗೆ, ನಿವೃತ್ತಿಯಾದ ಮೇಲೆ ಖರ್ಚಿಗೆ ಹಣ ಹೊಂದಿಸುವುದು ಹೇಗೆ? ಸಂಪಾದನೆಯ ಸದ್ವಿನಿಯೋಗ, ಭವಿಷ್ಯಕ್ಕಾಗಿ ಉಳಿತಾಯವೂ ಮುಖ್ಯವಲ್ಲವೇ?

ಬೆಟ್ಟದಂಥ ಸವಾಲು
ಈ ಸವಾಲು ಮಹಿಳೆಯರಿಗೇ ಜಾಸ್ತಿ. ಆಧಾರಸ್ತಂಭವಾಗಿದ್ದ ಪುರುಷನ ಅಕಾಲಿಕ ನಿಧನ, ಅನಾರೋಗ್ಯ ಅಥವಾ ವಿಚ್ಛೇದನದಂತಹ ಅನಿರೀಕ್ಷಿತ ತಿರುವುಗಳಿಗೆ ಆಕೆ ಸಿದ್ಧಳಾಗಿರುವುದೇ ಇಲ್ಲ. ಗೃಹಿಣಿಯರಂತೂ ಅಂತಹ ನಿರೀಕ್ಷೆ, ಅನುಭವ ಇಲ್ಲದ ಕಾರಣ ದಿಕ್ಕೆಡುತ್ತಾರೆ. ಸಮಾನತೆ ಸಾಕಾರವಾಗಿದೆ ಎಂದರೂ ಈಗಲೂ ಮಹಿಳೆಯರಿಗೆ ಸಂಬಳ ಕಡಿಮೆಯೇ ಇರುತ್ತದೆ. ಮದುವೆ, ಬಾಣಂತನ, ಮಕ್ಕಳ ಲಾಲನೆ-ಪಾಲನೆ ಹಾಗೂ ಕುಟುಂಬದ ಹಿರಿಯರ ಚಾಕರಿಗೆಂದು ಮಹಿಳೆಯರು ಆಗಾಗ ದೀರ್ಘ‌ ರಜೆ ಹಾಕುವ ಸನ್ನಿವೇಶಗಳು ಎದುರಾಗುತ್ತವೆ. ಕೆಲವೊಮ್ಮೆ ಕೆಲಸವನ್ನೇ ಬಿಡಬೇಕಾಗುತ್ತದೆ. ಪತಿಯ ವರ್ಗಾವಣೆ ಆದಾಗ ಹೊಸ ಊರಿನಲ್ಲಿ ಸೂಕ್ತ ಉದ್ಯೋಗ ಸಿಗುವುದೂ ಕಷ್ಟವಾಗುತ್ತದೆ.

Advertisement

ಇರಲಿ ಆಪದ್ಧನ
ಹೂಡಿಕೆಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲವಾದರೂ ಉಳಿತಾಯ ಮನೋಭಾವ ಜಾಸ್ತಿ ಇರುವುದು ಹೆಂಗಸರಲ್ಲೇ. ಸಾಸಿವೆ – ಜೀರಿಗೆ ಡಬ್ಬಗಳಲ್ಲಿ, ಸೀರೆಗಳಲ್ಲಿ ಮುಚ್ಚಿಟ್ಟ ಹಣ ಮಕ್ಕಳ ಶಾಲೆ ಶುಲ್ಕ, ಬಟ್ಟೆ-ಬರೆ, ಆರೋಗ್ಯ ವೆಚ್ಚಕ್ಕೆ ಒದಗುವುದಿಲ್ಲವೇ? ಬಳೆ, ಚೈನು, ನೆಕ್ಲೇಸು ಅಂತ ಮಾಡಿಟ್ಟುಕೊಂಡ ಬಂಗಾರ ಕಷ್ಟ ಕಾಲದಲ್ಲಿ ಎಷ್ಟೋ ಜನರ ಕೈಹಿಡಿದಿವೆ. ಮ್ಯೂಚುವಲ್ ಫ‌ಂಡ್‌ ಇತ್ಯಾದಿಗಳಂತೆ ಹೆಚ್ಚು ಲಾಭ ತಂದುಕೊಡದಿದ್ದರೂ ಚಿಂತೆಯಿಲ್ಲ. ತಮ್ಮ ಹಣ ಸುರಕ್ಷಿತವಾಗಿದ್ದರೆ ಸಾಕು ಎಂದು ಅವರು ಬಯಸುವುದನ್ನು ತಪ್ಪೆನ್ನಲಾಗದು.

ಕೆಲವು ಟಿಪ್ಸ್‌

•ಉಳಿತಾಯ ಹಾಗೂ ಹೂಡಿಕೆಯನ್ನು ವೃತ್ತಿ ಜೀವನದ ಆರಂಭದಲ್ಲೇ ಶುರು ಮಾಡಿ.

•ಜೀವ ವಿಮೆ, ಆರೋಗ್ಯ ವಿಮೆ ಮಾಡಿಸಲು ಹಿಂಜರಿಕೆ ಬೇಡ.

•ಕೆಲಸ ಬಿಡಬೇಕಾದ ಅಥವಾ ಸುದೀರ್ಘ‌ ರಜೆ ಪಡೆಯಬೇಕಾದ ಸಂದರ್ಭಕ್ಕೆ ತುರ್ತು ನಿಧಿ ಒಂದಿರಲಿ. ಇದೇ ಅವಧಿಯಲ್ಲಿ ನಿಮ್ಮ ವೃತ್ತಿ ಕ್ಷೇತ್ರದ ಹೊಸ ಸಂಗತಿಗಳತ್ತಲೂ ಗಮನವಿರಲಿ. ಮತ್ತೆ ಕೆಲಸಕ್ಕೆ ಸೇರುವ ಹೊತ್ತಿಗೆ ನೀವು ಅಪ್‌ಡೇಟ್ ಆಗಿರುವುದು ಮುಖ್ಯ.

•ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ, ಕುಟುಂಬದ ಆರ್ಥಿಕ ನಿರ್ಧಾರಗಳನ್ನು ಜೊತೆಯಾಗಿ ತೆಗೆದುಕೊಳ್ಳಿ. ಮುಚ್ಚುಮರೆ ಬೇಡ.

-ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next