Advertisement
ಭೂಪರಿವರ್ತನೆ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಕಚೇರಿಯ ಮೂಲಕ ಅವರ ಡಿಜಿಟಲ್ ಸಹಿಯೊಂದಿಗೆ ಮಾಡಬೇಕು ಹಾಗೂ ಭೂ ಪರಿವರ್ತನೆಗೆ ಅರ್ಜಿಯೊಂದಿಗೆ, ಬೇರೆ ಬೇರೆ ಇಲಾಖೆಗಳ ನಿರಾಕ್ಷೇಪಣ ಪತ್ರಗಳನ್ನು ಸಲ್ಲಿಸಲೇಬೇಕು ಎಂಬ ಸಬೂಬು ನೀಡಿ ಕಂದಾಯ ಇಲಾಖೆಯು ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರಿಂದಾಗಿ ಜಿಲ್ಲೆಯ ಎಲ್ಲ ತಾಲೂಕುಗಳ ಜನರು ಕೂಡ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಾದ ಪ್ರಸಂಗ ಎದುರಾಗಿದೆ. ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುವ ಇಂದಿನ ಕಾಲದಲ್ಲಿ ಅರ್ಜಿಯ ಇತ್ಯರ್ಥಕ್ಕಾಗಿ ಮಂಗಳೂರಿಗೆ ಸುತ್ತಾಡುವ ಪ್ರಮೇಯ ಈ ಮೂಲಕ ಮುಂದುವರಿಯುವಂತಾಗಿದೆ.
Related Articles
ಈ ಹಿಂದೆ ಜಿಲ್ಲೆಯಲ್ಲಿ ಸುಮಾರು 200ರಿಂದ 250ರಷ್ಟು ಭೂಪರಿವರ್ತನೆ ಅರ್ಜಿಗಳು ಪ್ರತೀ ತಿಂಗಳು ಸಲ್ಲಿಕೆಯಾಗುತ್ತಿದ್ದವು. ಇದು ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಅತ್ಯಧಿಕ ಎಂದು ಕೂಡ ಉಲ್ಲೇಕವಾಗಿತ್ತು. ಇದರಿಂದಾಗಿ ಭೂಪರಿವರ್ತನೆ ಶುಲ್ಕವಾಗಿ ಪ್ರತೀ ತಿಂಗಳು ರಾಜ್ಯ ಸರಕಾರಕ್ಕೆ ಲಕ್ಷಾಂತರ ರೂ. ಸಂದಾಯವಾಗುತ್ತದೆ. ಆದರೆ, ಕಂದಾಯ ಇಲಾಖೆಯ ಎಡವಟ್ಟಿನಿಂದಾಗಿ ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಭೂಪರಿವರ್ತನೆಯೇ ನಡೆದಿಲ್ಲ. ವಿಶೇಷವೆಂದರೆ, ಕಂದಾಯ ಇಲಾಖೆ ಜಾರಿಗೊಳಿಸಿದ ಹೊಸ ಸಾಫ್ಟ್ವೇರ್ ಹೇಗಿದೆ? ಅದು ಕಾರ್ಯ ನಿರ್ವಹಿಸುತ್ತಿದೆಯೇ? ಎಂಬುದು ಕೂಡ ಇನ್ನೂ ಗೊತ್ತಿಲ್ಲ.
Advertisement
ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಿದ್ದು, ಕಡಬ ಹಾಗೂ ಮೂಡಬಿದಿರೆ ತಾಲೂಕು ಘೋಷಣೆಯಾಗಿ ಇಲ್ಲಿ ವಿಶೇಷ ತಹಶೀಲ್ದಾರ್ ನೇಮಕವಾಗಿದೆ. ಹೀಗಾಗಿ ಒಟ್ಟು 7 ತಾಲೂಕುಗಳ ಇತರ ಕಚೇರಿ ಸಂಬಂಧಿತ ಕೆಲಸಗಳ ಜತೆಗೆ ಎಲ್ಲ ಭೂಪರಿವರ್ತನೆ ಅರ್ಜಿಗಳನ್ನು (ಪಟ್ಟ ಮತ್ತು ಭೂ ಸುಧಾರಣಾ ಕಾಯಿದೆ ಪ್ರಕಾರ ಬಂದ ಜಮೀನುಗಳು) ಕೂಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ವಿಲೇವಾರಿ ಮಾಡಬೇಕಾಗಿರುವುದರಿಂದ ಸಮಸ್ಯೆ ಉಲ್ಬಣಿಸಿದೆ.
ಈ ಹಿಂದೆ ಜಿಲ್ಲೆಗೆ ಒಳಪಟ್ಟ 7 ತಾಲೂಕುಗಳ ಪಟ್ಟ ಜಮೀನುಗಳನ್ನು ಆಯಾ ತಾಲೂಕಿನ ತಹಶೀಲ್ದಾರರು ಸಕಾಲ ತಂತ್ರಾಂಶದ ಮೂಲಕ ಅರ್ಜಿ ಪಡೆದು, ಭೂ ಸುಧಾರಣಾ ಕಾಯಿದೆಯ ಪ್ರಕಾರ ಜಿಲ್ಲಾಧಿಕಾರಿಯವರು ಪಿ.ಎಲ್. ಒ. ತಂತ್ರಾಂಶದಂತೆ ಭೂಪರಿವರ್ತನೆ ಆದೇಶ ಹೊರಡಿಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ಆಯಾಯ ವ್ಯಾಪ್ತಿಯ ತಾಲೂಕು ಕಚೇರಿಯಲ್ಲಿಯೇ ಭೂಪರಿವರ್ತನೆ ಮಾಡಲು ಸಾಧ್ಯ ವಾಗುತ್ತಿತ್ತು. ಪರಿಣಾಮವಾಗಿ ಸಾರ್ವಜನಿಕರು/ ಅಧಿಕಾರಿಗಳಿಗೆ ಅನು ಕೂಲವಾಗುತ್ತಿತ್ತು.
ಭೂಪರಿವರ್ತನೆಯಿಂದ ಅರ್ಜಿದಾರ ಕಂಗಾಲು!ಈಗಿನ ಕಾನೂನಿನಂತೆ ಭೂಪರಿವರ್ತನೆ ಮಾಡಬೇಕಾದರೆ, ಭೂ ಮಾಪನ ಇಲಾಖೆಯಿಂದ 11ಇ ನಕ್ಷೆ (ಕಂಪ್ಯೂಟರೈಸ್ಡ್ ಸ್ಕೆಚ್), ಭೂ ಸ್ವಾಧೀನ ಕಚೇರಿಯಿಂದ ನಿರಾಕ್ಷೇಪಣಾ ಪತ್ರ, ಸಿಆರ್‌ಝಡ್ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ, ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯಿಂದ (ಮಹಾನಗರ ಪಾಲಿಕೆ, ಪುರಸಭೆ, ಗ್ರಾಮ/ಪಟ್ಟಣ ಪಂಚಾಯತ್, ನಗರಸಭೆ) ನಿರಾಕ್ಷೇಪಣಾ ಪತ್ರ, ಮಾಲಿನ್ಯ ನಿಯಂತ್ರಣಾ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ, ಅಗ್ನಿ ಶಾಮಕ ಮಂಡಳಿಯ ನಿರಾಕ್ಷೇಪಣಾ ಪತ್ರ, ಸಂಪರ್ಕ ರಸ್ತೆಯ ಬಗ್ಗೆ ಸಂಬಂಧಪಟ್ಟ ಕಚೇರಿ (ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಪಂಚಾಯತ್, ಪಾಲಿಕೆ)ನಿರಾಕ್ಷೇಪಣಾ ಪತ್ರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರಗಳನ್ನು ಸಲ್ಲಿಸಿ ಅನಂತರ ಜಿಲ್ಲಾಧಿಕಾರಿಯವರ ಡಿಜಿಟಲ್ ಸಹಿಯೊಂದಿಗೆ ಭೂ ಪರಿವರ್ತನೆ ಆದೇಶ ಪಡೆಯಬೇಕು. ಅಂದು 11ಇ ನಕ್ಷೆ /ನಿರಾಕೇಪಣಾ ಪತ್ರ ಬೇಡ ಅಂದಿದ್ದರು!
ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ 11ಇ ನಕ್ಷೆ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಜಮೀನು ಭೂಪರಿವರ್ತಿಸಲು ಆವಶ್ಯಕತೆ ಇಲ್ಲ ಹಾಗೂ ಆ ಜಮೀನಿನಲ್ಲಿ ಕಟ್ಟಡ ಕಟ್ಟುವ ಸಂದರ್ಭದಲ್ಲಿ ಕಟ್ಟಡದ ಮಹಡಿಗಳನ್ವಯ ನಿರಾಕ್ಷೇಪಣಾ ಪತ್ರವನ್ನು ನೀಡುವಂತೆ ತಿಳಿಸಿದ್ದರು. ಜತೆಗೆ, ಜಿಲ್ಲೆಯು ಈ ಹಿಂದಿನ ಮದ್ರಾಸ್ ಪ್ರಾಂತ್ಯವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಮತಟ್ಟಿಲ್ಲದ ಗುಡ್ಡ ಪ್ರದೇಶವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಜಮೀನನ್ನು ಭೂ ಪರಿವರ್ತಿಸಲು ಪ್ರತ್ಯೇಕ ಕಾನೂನನ್ನು ಕೂಡ ಹೊರಡಿಸಿದ್ದರು. ಹೀಗಾಗಿ, ಭೂ ಮಾಪಕರು ಭೂ ಪರಿವರ್ತನೆಗೆ ಕೋರಿದ ಜಮೀನನ್ನು ಅಳತೆ ಮಾಡಿ, ನಕ್ಷೆಯಲ್ಲಿ ಆ ಜಮೀನನ್ನು ಎಫ್.ಎಂ.ಬಿ. ನಕ್ಷೆಯ ಒಳಗೆ ಗುರುತಿಸಿ, ಸಂಪರ್ಕ ರಸ್ತೆಯ ವಿಸ್ತರಣೆ, ಜಮೀನಿನ ವಿಸ್ತೀರ್ಣ, ಚಕ್ಕು ಬಂದಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಎಷ್ಟು ದೂರ ಇದೆ ಎಂಬುದನ್ನು ಗುರುತಿಸಿ ಪರ್ಯಾವೇಕ್ಷಕರ ಸಹಿಯೊಂದಿಗೆ ನಕ್ಷೆಯನ್ನು ನೀಡುತ್ತಿದ್ದರು. ಆದರೆ ಈಗ ಹೊಸ ತಂತ್ರಾಂಶದಲ್ಲಿ ತಿಳಿಸಿರುವಂತೆ 11ಇ ನಕ್ಷೆಯಲ್ಲಿ ಎಫ್.ಎಂ.ಬಿ. ನಕ್ಷೆಯ ಪೂರ್ಣ ಚಿತ್ರದಲ್ಲಿ ಜಮೀನನ್ನು ಗುರುತಿಸಿ ಸಂಪರ್ಕ ರಸ್ತೆಯ ಬಗ್ಗೆ ಸರಿಯಾದ ಮಾಹಿತಿ ಕೂಡ ದೊರಕುತ್ತಿಲ್ಲ. 11ಇ ನಕ್ಷೆಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಆಕಾರ್ ಬಂದ್ ಮತ್ತು ಅಡಂಗಲ್ ತಾಳೆ ಹೊಂದದೇ ಇದ್ದಲ್ಲಿ ತಾಂತ್ರಿಕವಾಗಿ ಆರ್.ಆರ್.ಟಿ.ಯ ಬಗ್ಗೆ ಸಹಾಯಕ ಆಯುಕ್ತರಿಗೆ ಕಡತ ರವಾನೆಯಾಗಿ ವರ್ಷಾನುಗಟ್ಟಲೇ ಕಾಲಾವಕಾಶ ತೆಗೆದುಕೊಂಡರೂ ಯಾವ ಕಾರಣಕ್ಕೂ ತಾಳೆ ಹೊಂದುವುದಿಲ್ಲ. ಇಂತಹ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ. ಸಚಿವರು, ಅಧಿಕಾರಿಗಳ ಜತೆ ಚರ್ಚೆ
ಭೂಪರಿವರ್ತನೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲಿ ಆಗಿರುವ ಸಮಸ್ಯೆ ಸರಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಕಂದಾಯ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಚರ್ಚೆ ನಡೆಸಿ, ಸಾರ್ವಜನಿಕರಿಗೆ ಸುಲಭವಾಗುವ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು.
– ಯು.ಟಿ.ಖಾದರ್,
ನಗರಾಭಿವೃದ್ಧಿ ಸಚಿವರು ದಿನೇಶ್ ಇರಾ