Advertisement
ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ, ಪಟ್ಟಣ, ಹಳ್ಳಿ, ಓಣಿಗಳಲ್ಲಿ ಜಲಜೀವನ್ ಮಿಷನ್ ಅನುಷ್ಠಾನಕ್ಕೆ ಪೈಪ್‌ಲೈನ್ ಅಳವಡಿಕೆ, ಹೆದ್ದಾರಿ ಬದಿಯಲ್ಲಿ ಮನೆಮನೆಗೆ ಗ್ಯಾಸ್ ಪೂರೈಸುವ ಯೋಜನೆಗೆ ಪೈಪ್‌ಲೈನ್ ಅಳವಡಿಕೆ, ಗ್ರಾಮೀಣ ಭಾಗದಲ್ಲಿ ಚರಂಡಿ ಹೂಳೆತ್ತುವಿಕೆ ಸಹಿತ ವಿವಿಧ ಕಾಮಗಾರಿಗಳಿಗಾಗಿ ರಸ್ತೆಯನ್ನು ಅಗೆದು ಹಾಕಿರುವುದೇ ಜನರ ತೊಂದರೆ, ಆತಂಕಕ್ಕೆ ಕಾರಣವಾಗಿದೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೆಲವೆಡೆ ಚರಂಡಿಗಳೇ ಮುಚ್ಚಿ ಹೋಗಿವೆ. ಅಂತಹದರಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್ ಅಳವಡಿಕೆಗಾಗಿ ಹೆಚ್ಚಿನ ಕಡೆಗಳಲ್ಲೂ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಪೈಪ್‌ಲೈನ್ ಅಳವಡಿಕೆಯಾದ ಕಡೆೆಗಳಲ್ಲಿ ಅಗೆದ ರಸ್ತೆ ಬದಿಯಲ್ಲಿ ಹೊಂಡವನ್ನು ಮುಚ್ಚದ ಪರಿಣಾಮ ಅವಘಡಕ್ಕೆ ಕಾರಣವಾಗುತ್ತಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಕಾಂಕ್ರೀಟ್, ಡಾಮರು ಸಹಿತ ವಿವಿಧ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸುತ್ತಿವೆ. ಕೆಲವು ಕಾಂಕ್ರೀಟ್ ರಸ್ತೆಗಳ ಬದಿಯ ಬದುಗಳು ಆರಂಭಿಕ ಮಳೆಗೇ ಕುಸಿದು ಹೋಗಿದ್ದು ಮುಂದಿನ ಮಳೆಗೆ ಹೇಗಪ್ಪಾ ಪರಿಸ್ಥಿತಿ ಎಂದು ಜನ ಪ್ರಶ್ನಿಸುವಂತಾಗಿದೆ. ಗ್ರಾಮೀಣ ಭಾಗದ ರಸ್ತೆ ಬದಿಗಳಲ್ಲಿ ಪೈಪ್‌ಲೈನ್ ಕಾಮಗಾರಿಯಿಂದಾಗಿ ಹಿಂದೆ ಮಳೆ ನೀರು ಹರಿದು ಹೋಗುತ್ತಿದ್ದ ಚರಂಡಿಗಳು ಮುಚ್ಚಿ ಹೋಗಿವೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಚರಂಡಿಗಳು ದುರಸ್ತಿಯಾಗದೆ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ಕೃತಕ ನೆರೆಗೆ ಕಾರಣವಾಗುತ್ತಿದೆ. ಎಲ್ಲ ಕಡೆಗಳಲ್ಲೂ ರಸ್ತೆಯನ್ನು ಅಗೆದು ಹಾಕಿ, ಸಮರ್ಪಕವಾಗಿ ಹೊಂಡಗಳನ್ನು ಮುಚ್ಚದ ಪರಿಣಾಮ ಪಾದಚಾರಿ, ವಾಹನ ಸಂಚಾರ, ದ್ವಿಚಕ್ರ ವಾಹನ ಸವಾರರು ಹಾಗೂ ಜಾನುವಾರುಗಳ ಜೀವಕ್ಕೆ ಕಂಟಕವಾಗುವಂತಿದೆ.
Related Articles
ಪ್ರತೀ ವರ್ಷ ಮಳೆಗಾಲಕ್ಕೆ ಚರಂಡಿ ಹೂಳೆತ್ತಿ ಪೂರ್ವ ಸಿದ್ಧತೆ ನಡೆಸಬೇಕಿದ್ದರೂ ಕೆಲವು ಗ್ರಾ.ಪಂ. ವ್ಯಾಪ್ತಿಗಳಲ್ಲಿ ಜೂನ್ ಅರ್ಧ ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಚರಂಡಿ ಹೂಳೆತ್ತುವಿಕೆಗೆ ಮುಂದಾಗದಿರುವುದು ಅಪಾಯದ ಭೀತಿ ಹೆಚ್ಚಲು ಕಾರಣವಾಗಿದೆ. ಕೆಲವೆಡೆ ಗ್ರಾಮೀಣ ರಸ್ತೆಯ ಇಕ್ಕೆಲಗಳಲ್ಲಿದ್ದ ಚರಂಡಿಗಳು ಮುಚ್ಚಿ ಹೋಗಿದ್ದರೆ ಮತ್ತೆ ಕೆಲವೆಡೆ ಹೊಸ ಕಾಂಕ್ರಿಟ್ ರಸ್ತೆಯ ಅಂಚಿಗೆ ಮಣ್ಣು ಹಾಕಿ ಸಮತಟ್ಟು ಮಾಡದೇ ಅಪಾಯವನ್ನು ಆಹ್ವಾನಿಸುತ್ತಿದೆ. ಪ್ರತೀ ವರ್ಷ ಮಳೆಗಾಲಕ್ಕೆ ಮೊದಲು ಜಂಗಲ್ ಕಟ್ಟಿಂಗ್ ಮಾಡಲಾಗುತ್ತಿದ್ದರೂ, ಅದನ್ನು ತೆರವು ಮಾಡದೆ ರಸ್ತೆಯಂಚಿನಲ್ಲಿ ಇಲ್ಲವೇ ಚರಂಡಿಯಲ್ಲಿ ತುಂಬಿಸುವುದು ಸಾಮಾನ್ಯವಾಗುತ್ತಿದೆ. ಇದು ಪರೋಕ್ಷವಾಗಿ ಕೃತಕ ನೆರೆಗೆ ಕಾರಣವಾಗುತ್ತಿದೆ. ಬೀದಿ ದೀಪ ಹಾಗೂ ತಂತಿಗಳು ಬಳ್ಳಿ, ಮರದ ಕೊಂಬೆಗಳಿಂದ ಮುಚ್ಚಿ ಹೋಗಿದ್ದರೂ ಗ್ರಾ.ಪಂ. ಆಗಲೀ, ಮೆಸ್ಕಾಂ ಆಗಲಿ ಅದನ್ನು ತೆರವುಗೊಳಿಸಲು ಮುಂದಾಗದಿರುವುದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
Advertisement
ಹದಗೆಟ್ಟಿದೆ ಹಿರಿಯಂಗಡಿ-ಹವಾಲ್ದಾರ್ ಬೆಟ್ಟು ಕೂಡು ರಸ್ತೆಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಹಿರಿಯಂಗಡಿ- ಹವಾಲ್ದಾರ್‌ಬೆಟ್ಟು ಕೂಡು ರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ಮಳೆಗಾಲ ಆರಂಭದ ಈ ಹೊತ್ತಿನಲ್ಲಿ ಸಾಕಷ್ಟು ಸಮಸ್ಯೆ ತಂದೊಡುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಈ ರಸ್ತೆಯು ಕಾರ್ಕಳ ಗಾಂಧಿ ಮೈದಾನ, ಕಾರ್ಕಳ ಪೇಟೆಗೆ ಬರಲು ಹತ್ತಿರವಾದ ಲಿಂಕ್ ರೋಡ್ ಆಗಿರುತ್ತದೆ. ಆದುದರಿಂದ ಇಲ್ಲಿ ದಿನ ಶಾಲೆಗೆ ಹೋಗುವ ವಾಹನಗಳು ಹಾಗೂ ದೇವಸ್ಥಾನಕ್ಕೆ ಹೋಗುವ ಭಕ್ತರು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ. ಮಳೆ ನೀರು ರಸ್ತೆಯಲ್ಲಿ ನಿಂತು, ರಸ್ತೆಯಲ್ಲೇ ಹರಿದು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವಾಹನಗಳಿಗೆ ಸಂಚರಿಸಲು ಕಷ್ಟ ವಾಗುತ್ತದೆ. ಸಾರ್ವಜನಿಕರು ವಾಹನಗಳಲ್ಲಿ, ಕಾಲ್ನಡಿಗೆಯಲ್ಲಿ ತೆರಳುವಾಗೆಲ್ಲ ತೀವ್ರ ತೊಂದರೆ ಅನುಭವಿಸುತ್ತಾರೆ ಎಂದವರು ದೂರುತ್ತಿದ್ದಾರೆ. ಕೆಲವು ಸಮಯಗಳ ಹಿಂದೆ ಈ ಭಾಗದಲ್ಲಿ ಒಳಚರಂಡಿಯ ಕಾಮಗಾರಿ ನಡೆದಿರುತ್ತದೆ. ಬಳಿಕ ರಸ್ತೆಯನ್ನು ಸುಸ್ಥಿತಿಗೆ ತರುವಲ್ಲಿ ಮರೆತಿದ್ದಾರೆ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ಇವುಗಳ ಅತೀವ ಸಮಸ್ಯೆಗಳನ್ನು ತಂದಿಡುತ್ತಿದೆ ಎಂದು ಸ್ಥಳಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಪರಿಸರದಿಂದ ಕಾರ್ಕಳ ಪೇಟೆಗೆ ಬರುವವರಿಗೆಲ್ಲ ಇದೇ ರಸ್ತೆ ಅನುಕೂಲವಾಗಿದ್ದು, ಈ ರಸ್ತೆ ಅವ್ಯವಸ್ಥೆಯಿಂದ ನಗರದೊಳಗೆ ಸಮಸ್ಯೆ ಎದುರಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಆದಷ್ಟು ಬೇಗ ಸರಿಪಡಿಸುವಂತೆ ಒತ್ತಾಯಿಸಿರುವುದಲ್ಲದೆ ಈ ಬಗ್ಗೆ ಪುರಸಭೆಗೆ ಈಗಾಗಲೇ ಸ್ಥಳೀಯರು ಮನವಿಯನ್ನು ನೀಡಿದ್ದಾರೆ. ಹವಾಲ್ದಾರ್ ಬೆಟ್ಟು- ಗಾಂಧಿ ಮೈದಾನ್ ರಸ್ತೆ ಸಮಸ್ಯೆಯಿದ್ದು, ಸುಮಾರು 6 ತಿಂಗಳಿಂದ ಸಂಬಂಧಪಟ್ಟವರಿಗೆ ಮನವಿ ಮಾಡುತ್ತ ಬರುತ್ತಿದ್ದೇವೆ. ಮಳೆಗಾಲ ಪೂರ್ವದಲ್ಲಿ ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸಬೇಕಿತ್ತು. ಅದು ಮಾಡಿಲ್ಲ. ಇನ್ನಾದರೂ ಸಮಸ್ಯೆ ಬಗೆಹರಿಸಿಕೊಡಬೇಕು. ಎಂದು ಸ್ಥಳೀಯ ರಾದ ದಯಾನಂದ ಪೈ ಆಗ್ರಹಿಸಿದ್ದಾರೆ. ಮುಗಿಯದ ಸಮಸ್ಯೆ
ಕೆಲವೆಡೆ ರಾ.ಹೆ. 66ರಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ನೀರು ನಿಂತು ಕೃತಕ ನೆರೆ ಉಂಟಾಗಿ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಸಮಸ್ಯೆ ಬಂದಲ್ಲಿ, ಒತ್ತಡ ಹೆಚ್ಚಿದಲ್ಲಿ ರಾ.ಹೆ.66 ಗುತ್ತಿಗೆದಾರ ಕಂಪೆನಿ ಚರಂಡಿ ದುರಸ್ತಿ ಸಹಿತ ಸರಾಗವಾಗಿ ನೀರು ಹರಿದು ಹೋಗಲು ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಅದು ಮುಗಿಯಲಾರದ ಸಮಸ್ಯೆ ಎಂಬಂತಾಗಿದೆ. ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ನಡೆಯುತ್ತಿರುವ ರಸ್ತೆ ಕಟ್ಟಿಂಗ್, ಮಳೆಯ ನಡುವೆಯೇ ಕಾಮಗಾರಿ ನಡೆಸುವುದು, ದುರಸ್ತಿಯಾಗದ ಚರಂಡಿಗಳಿಂದಾಗಿ ಆಗುತ್ತಿರುವ ಸಮಸ್ಯೆಗಳು ನಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರಿಂದ ವರದಿ ಪಡೆಯುತ್ತೇವೆ. ಜಲಜೀವನ್ ಮಿಷನ್, ಗ್ಯಾಸ್ ಪೈಪ್‌ಲೈನ್ ಸಹಿತ ವಿವಿಧ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತದೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು.
-ಕೂರ್ಮಾ ರಾವ್,
ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ