Advertisement
ರಾ.ಹೆ.66 ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದೆ ಆದರೂ ಕೂಡಾ ಮಳೆ ನೀರು ಹರಿದು ಹೋಗಲು ಸಮರ್ಪಕವಾದ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂಧ ನೀರು ಪ್ರಮುಖ ರಸ್ತೆಗೆ, ತಾತ್ಕಾಲಿಕ ಬಸ್ ತಂಗುದಾಣ ಹಾಗೂ ಕೃಷಿ ಭೂಮಿಗಳಿಗೆ ನುಗ್ಗುವ ಸಾಧ್ಯತೆಗಳಿವೆ.
ಹೆದ್ದಾರಿಯ ಬಳಿಯ ಗ್ರಾ.ಪಂ. ಬಳಿ ಭಾರಿ ಪ್ರಮಾಣದಲ್ಲಿ ಹರಿದು ಬರುವ ಮಳೆ ನೀರು ನೇರವಾಗಿ ಬಂದು ತೆಕ್ಕಟ್ಟೆ ಪ್ರಮುಖ ಭಾಗದಲ್ಲಿರುವ ಬಸ್ ತಂಗುದಾಣವನ್ನು ಆವರಿಸುತ್ತಿದೆ. ಮಲ್ಯಾಡಿ ಒಳ ರಸ್ತೆಗೆ ಅಳವಡಿಸಿರುವ ಸಿಮೆಂಟ್ ಪೈಪ್‌ಗ್ಳು ಕಿರಿದಾಗಿದ್ದು ಹೂಳು ತುಂಬಿಕೊಂಡಿದೆ. ಪರಿಣಾಮ ವಾಗಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತೆಕ್ಕಟ್ಟೆ ಕೊಮೆ ಇತ್ತೀಚೆಗಷ್ಟೆ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಹೆದ್ದಾರಿಯಿಂದ ಸುಮಾರು 300 ಮೀ. ಒಳಗೆ ಎರಡೂ ಬದಿ ಒಳ ಚರಂಡಿ ನಿರ್ಮಿಸಲಾಗಿದೆಯಾದರೂ ಕೃಷಿ ಭೂಮಿಗಳು ಇರುವ ಭಾಗದಲ್ಲಿ ಈ ಕಾರ್ಯ ಆಗಿಲ್ಲ. ಪರಿಣಾಮ ಹೆದ್ದಾರಿಯಿಂದ ಬಂದ ನೀರು ಕೃಷಿ ಭೂಮಿಗೆ ನುಗ್ಗುವ ಸಾಧ್ಯತೆ ಇದೆ. ಕೃತಕ ನೆರೆಯ ಭೀತಿ
ಗ್ರಾಮದ ಪ್ರಮುಖ ಭಾಗದಲ್ಲಿ ರುವ ಅಂಗಡಿ ಮುಂಗಟ್ಟು ಗಳ ಎದುರು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಅವಕಾಶವಿಲ್ಲ. ಇದರಿಂದ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೂ ನಡೆದಾಡಲು ಸಾಧ್ಯವಾಗದೇ ಹೆದ್ದಾರಿಯಲ್ಲೇ ನಡೆಯಬೇಕಾದ ಕಷ್ಟವಿದೆ.
Related Articles
ಮುಂಗಾರು ಆರಂಭದ ಪೂರ್ವದಲ್ಲಿಯೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೆಳೆದು ನಿಂತ ಗಿಡಗಂಟಿಗಳ ತೆರವು ಕಾರ್ಯ ಹಾಗೂ ಒಳ ಚರಂಡಿ ಸಮಸ್ಯೆಗಳಿರುವ ಕಡೆ ಗಮನಹರಸಿ ಪರಿಹಾರ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.
– ವೀರಶೇಖರ್, ತೆಕ್ಕಟ್ಟೆ ಪಿಡಿಒ
Advertisement
ಕ್ರಮ ಅಗತ್ಯಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆಗಾಲದ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ .ರಾ.ಹೆ.66 ರಿಂದ ಬರುವ ಅಪಾರ ಪ್ರಮಾಣದ ನೀರು ಕೃಷಿ ಭೂಮಿಯನ್ನು ಆವರಿಸುವ ಸಾಧ್ಯತೆ ಇದೆ. ತೋಡುಗಳ ಹೂಳೆತ್ತುವ ಬಗ್ಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.
– ವಿಟಲ್ ದೇವಾಡಿಗ, ತೆಕ್ಕಟ್ಟೆ ಕೃಷಿಕರು. – ಲೋಕೇಶ್ ಆಚಾರ್ಯ ತೆಕ್ಕಟ್ಟೆ