ವಿಧಾನಸಭೆ : ‘ನಾವು ಸಾಲ ಮಾಡಿ ಹೋಳಿಗಿ ತಿನ್ನೋ ಮಂದಿ ಅಲ್ಲ, ರೊಟ್ಟಿ ತಿನ್ನೋರು. ಕೇಂದ್ರ ಸರಕಾರ ನಾಲ್ಕು ಸಾವಿರ ಕೋಟಿ ಹೆಚ್ಚುವರಿ ಸಾಲ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಿದರೂ ನಾವು ತೆಗೆದುಕೊಂಡಿಲ್ಲ’ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
”ಬೊಮ್ಮಾಯಿ ಸಾಲ ಮಾಡಿ ತುಪ್ಪ ತಿಂದಿದ್ದಾರೆ” ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಕೇಂದ್ರ ಸರ್ಕಾರ ನಮಗೆ ಜಿಎಸ್.ಟಿ ಪರಿಹಾರ ನಿಧಿಯಿಂದ 54 ಸಾವಿರ ಕೋಟಿ ನೀಡಿದೆ. ಸಾಲದ ರೂಪದಲ್ಲಿ 30 ಸಾವಿರ ಕೋಟಿ ಕೊಟ್ಟಿದೆ’ಎಂದು ಹೇಳಿದರು.
‘ಕೇಂದ್ರದಿಂದ 12990 ಕೋಟಿ ನಮಗೆ ಜಿಎಸ್.ಟಿ ಪರಿಹಾರ ಬಾಕಿ ಬರಬೇಕು.ಸದ್ಯದಲ್ಲೇ ಕೊಡುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ನಮಗೆ ಇನ್ನೂ 4000 ಸಾವಿರ ಕೋಟಿ ತೆಗೆದುಕೊಳ್ಳುವ ಅವಕಾಶ ಕೊಟ್ಟಿದ್ದರೂ ತೆಗೆದುಕೊಂಡಿಲ್ಲ.ನಮಗೆ ಅವಕಾಶ ಇದ್ದರೂ ಸಾಲ ತೆಗೆದುಕೊಳ್ಳಲಿಲ್ಲ’ ಎಂದು ವಿವರಿಸಿದರು.
‘2021ಕ್ಕೆ ಹಣಕಾಸು ಆಯೋಗ 24,019ಕೋಟಿ ರೂ ಆರ್ಥಿಕ ವರ್ಷಕ್ಕೆ ಫಂಡ್ ಕೊಡಲು ಶಿಫಾರಸ್ಸು ಮಾಡಿದೆ.ನಮಗೆ 27,145 ಕೋಟಿ. ರೂ. ಬಂದಿದೆ. ಕೇಂದ್ರ ಸರ್ಕಾರ ಶಿಫಾರಸ್ಸಿಗಿಂತ ಹೆಚ್ಚಾಗಿ ನೀಡಿದೆ. 2022-23 ಬರುವ ವರ್ಷಕ್ಕೆ ಹಣಕಾಸು ಆಯೋಗ 26,719 ಶಿಫಾರಸ್ಸು ಮಾಡಿದ್ದು, ಕೇಂದ್ರ ಬಜೆಟ್‌ನಲ್ಲಿ 29,736ಕೋಟಿ ರೂ. ಶಿಫಾರಸು ಮಾಡಿದೆ’ ಎಂದರು.
‘8000 ಸಾವಿರ ಕೋಟಿ ನಮಗೆ ಜಿಎಸ್ಟಿ ಪಾಲು ಬಂದಿದೆ.93 ಸಾವಿರ ಕೋಟಿ ಕೇಂದ್ರದಿಂದ ವಿವಿಧ ರೀತಿಯಲ್ಲಿ ಅನುದಾನ ಬರುತ್ತಿದೆ. ಯುಪಿಎ ಕಾಲಕಿಂತಲೂ ಮೋದಿ ಬಂದ ಬಳಿಕ ನಮಗೆ ಹೆಚ್ಚು ಪರಿಹಾರ ಸಿಕ್ಕಿದೆ’ ಎಂದು ವಿವರಿಸಿದರು.
‘ಕರ್ನಾಟಕ ರಾಜ್ಯದ GST ಸಂಗ್ರಹ 87,069ಕೋಟಿ ರೂ.ಇದರಲ್ಲಿ48,000 ಕೋಟಿ ಹಿಂತಿರುಗಿ ಬಂದಿದೆ. ಸ್ಟೇಟ್GST ಯಲ್ಲಿ40% ವಾಪಸ್ ಬರಲಿದೆ.ಫೆಬ್ರವರಿ ಅಂತ್ಯದಲ್ಲಿ 16,491ಕೋಟಿ ಬಂದಿದೆ’ ಎಂದರು.