Advertisement

ಹೆಚ್ಚು ಅಂಕ ಗಳಿಸಿದರೂ ಗಂಡಾಂತರವೆ ?

07:25 AM Aug 08, 2017 | Team Udayavani |

ಉಡುಪಿ: ಈಗ ಹೆಚ್ಚು ಹೆಚ್ಚು ಅಂಕ ಗಳಿಸಲು ಮೂಗುಬಾಯಿಗೆ ತುರುಕಿದಂತೆ ಪ್ರಯತ್ನಿಸುವುದು ಕಂಡುಬರುತ್ತಿದೆ. ಇದು ಕೇವಲ ಪತ್ರಿಕೆಗಳಲ್ಲಿ ಸುದ್ದಿ ಬರಲು ಮಾತ್ರ ಸೀಮಿತವಾಗುತ್ತದೆಯೆ? ನಿಜ ಜೀವನದಲ್ಲಿ ಇದೇ ಪ್ರತಿಕೂಲವಾಗುತ್ತಿದೆಯೆ? ಒಂದರ್ಥದಲ್ಲಿ ಹೌದು ಎನ್ನುತ್ತಿವೆ ಘಟನೆಗಳು. 

Advertisement

ಪ್ರಕ್ರಿಯೆ ಆರಂಭವಾಗಿ ಎರಡೂವರೆ ವರ್ಷಗಳ ಬಳಿಕ ಸರಕಾರಿ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಕೌನ್ಸೆಲಿಂಗ್‌ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆ. 7ರಿಂದ ಆರಂಭಗೊಂಡ ಕೌನ್ಸೆಲಿಂಗ್‌ ಆ. 17ರ ವರೆಗೆ ನಡೆಯಲಿದೆ. ಒಟ್ಟು 2,034 ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಇದರಲ್ಲಿ 1,500 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬಂದಿದ್ದರೂ ಸ್ಥಳ ನಿಯುಕ್ತಿ ಆಗಿರಲಿಲ್ಲ. ಈಗ ಇದಕ್ಕಾಗಿಯೇ ಕೌನ್ಸೆಲಿಂಗ್‌ ನಡೆಯುತ್ತಿದೆ. ಕೌನ್ಸೆಲಿಂಗ್‌ ಆರಂಭದಲ್ಲಿಯೇ ಅತೀ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳಿಗೆ “ಪ್ರಥಮ ಚುಂಬನಮ್‌ ದಂತ ಭಗ್ನಮ್‌’ ಎಂಬಂತಾಗಿದೆ. 

ಮೊದಲು ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಕೌನ್ಸೆಲಿಂಗ್‌ ತೆರೆದು, ಬಳಿಕ ಹೈದರಾಬಾದ್‌ ಕರ್ನಾಟಕದ ಜಿಲ್ಲೆಯ
ಕಾಲೇಜುಗಳಿಗೆ ಭರ್ತಿಗೊಳಿಸಲಾಗುತ್ತಿದೆ. ಸಾಮಾನ್ಯ ಹುದ್ದೆಗಳಿಗೆ ಬರುವಾಗ 3 ವಲಯಗಳನ್ನು ಗುರುತಿಸಲಾಗಿದೆ. ಇದರಲ್ಲಿ “ಸಿ’ ಗ್ರಾಮೀಣ, “ಬಿ’ ಅರೆಪಟ್ಟಣ, “ಎ’ನಗರ ಪ್ರದೇಶವೆಂದು ವಿಂಗಡಿಸಲಾಗಿದೆ. ಜಿಲ್ಲಾ ಕೇಂದ್ರಗಳ ನಗರವನ್ನು “ಎ’, ತಾಲೂಕು ಕೇಂದ್ರಗಳ ನಗರವನ್ನು “ಬಿ’, ಉಳಿದಂತೆ “ಸಿ’ ಎಂದು ಅರ್ಥೈಸಲಾಗಿದೆ. 

ಅತೀ ಹೆಚ್ಚು ರ್‍ಯಾಂಕ್‌ ಬಂದವರಿಗೆ ಮೊದಲು ಕೌನ್ಸೆಲಿಂಗ್‌ ನಡೆಯುತ್ತದೆ. ಇವರಿಗೆ ಮೊದಲು ಆಯ್ಕೆ ಮಾಡಲು ಕೊಡುವುದು “ಸಿ’ ಪ್ರದೇಶ= ಗ್ರಾಮೀಣ ಪ್ರದೇಶದ ಕಾಲೇಜುಗಳು. ವಿಷಯವಾರು ಅಭ್ಯರ್ಥಿಗಳ ನೇಮಕ ಗ್ರಾಮೀಣ ಪ್ರದೇಶಕ್ಕೆ ಆದ ಬಳಿಕ “ಬಿ’=ಅರೆಪಟ್ಟಣದ ಕಾಲೇಜುಗಳ ಹುದ್ದೆಗಳನ್ನು ಭರ್ತಿಗೊಳಿಸಲಾಗುತ್ತದೆ. ಕೊನೆಯಲ್ಲಿ ಬರುವುದು “ಎ’=ನಗರ ಪ್ರದೇಶದ ಕಾಲೇಜುಗಳಿಗೆ ನೇಮಕ. ಇದರಿಂದಾಗಿ ಹೆಚ್ಚು ಅಂಕ ಗಳಿಸಿದವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ತೆರಳಬೇಕು. ಇವರು ಈ ಪ್ರದೇಶ ಬೇಡವೆಂದರೂ ಕೊಡುವುದಿಲ್ಲವಂತೆ. ಹೆಚ್ಚು ಅಂಕ ಗಳಿಸಿದವರು ತಮ್ಮ ಊರು, ನೆಲೆಗಳನ್ನು ಬಿಟ್ಟು ಹಳ್ಳಿ ಕಡೆಗೆ ಹೋಗಬೇಕು, ಕಡಿಮೆ ಅಂಕ ಗಳಿಸಿದವರು ಆರಾಮವಾಗಿ ನಗರದಲ್ಲಿರುತ್ತಾರೆ. 

ಬೆಂಗಳೂರು, ಮೈಸೂರಿನಲ್ಲಿ ಡಿಯರ್‌ನೆಸ್‌ ಅಲೋವೆನ್ಸ್‌ (ತುಟ್ಟಿಭತ್ತೆ) ಶೇ. 30 ಇದ್ದರೆ ಗ್ರಾಮೀಣ ಭಾಗದಲ್ಲಿ ಕಡಿಮೆ ಇದೆ. ಇದರಂತೆ ಕಡಿಮೆ ಅಂಕ ಗಳಿಸಿದವರು ಹೆಚ್ಚಿನ ಸೌಲಭ್ಯವನ್ನು, ಹೆಚ್ಚು ಅಂಕ ಗಳಿಸಿದವರು ಕಡಿಮೆ ಸೌಲಭ್ಯವನ್ನು ಪಡೆಯುತ್ತಾರೆ. 

Advertisement

ವೈದ್ಯರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮವಿದ್ದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿಯೂ ತರಲಾಗಿದೆ ಎನ್ನಲಾಗುತ್ತಿದೆ. ಆದರೆ ವೈದ್ಯರಲ್ಲಿ ಹೆಚ್ಚು ಅಂಕ ಗಳಿಸಿದವರು, ಕಡಿಮೆ ಅಂಕ ಗಳಿಸಿದವರೆಂಬ ಭೇದಭಾವ ಮಾಡಲಿಲ್ಲ.

ಇಲ್ಲಿ ಈ ತಾರತಮ್ಯ ಮಾಡಲಾಗಿದೆ. ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸುವಾಗ ಅತೀ ಹೆಚ್ಚು ಅಂಕ ಗಳಿಸಿದವರಿಂದ ಆರಂಭವಾಗುವುದು ನಿಜ. ಆದರೆ ಅವರಿಗೆ ಅವರ ಆಯ್ಕೆಗೆ ಪ್ರಾಶಸ್ತ್ಯ ಕೊಡಬೇಕೆಂಬ ನಿಯಮವಿದ್ದರೂ ಈಗ ಇಲಾಖೆ ಆಯುಕ್ತರು ಕಾನೂನನ್ನು ತಪ್ಪಾಗಿ ಅರ್ಥೈಸಿ ಹೀಗೆ ಮಾಡಿದ್ದಾರೆಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ. ಹೆಚ್ಚು ಅಂಕ ಗಳಿಸಿದವರ ನಿಯುಕ್ತಿ ಆದ ಬಳಿಕ ಉಳಿದವರ ನೇಮಕವಾಗಬೇಕೆ ವಿನಾ ಉಳಿದವರಿಗೆ ಅಲ್ಲ ಎನ್ನುವುದು ಸಂತ್ರಸ್ತ ಅಭ್ಯರ್ಥಿಗಳ ವಾದ. 

Advertisement

Udayavani is now on Telegram. Click here to join our channel and stay updated with the latest news.

Next