ಬೆಂಗಳೂರು: ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರರ ಕಿರುಕುಳಕ್ಕೆ ಬೇಸತ್ತ ಇಂಗ್ಲಿಷ್ ವಿಭಾಗದ ಮಹಿಳಾ ಪ್ರೊಫೆಸರ್‌ವೊಬ್ಬರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಯನಗರ ನಿವಾಸಿ ಶಬಾನಾ (44) ಆತ್ಮಹತ್ಯೆಗೆ ಯತ್ನಿಸಿದ ಪ್ರೊಫೆಸರ್.
ಜಯನಗರದ 4ನೇ ಟಿ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಶಬಾನಾ, ಸೋಮವಾರ ಬೆಳಗ್ಗೆ ಕಾಲೇಜಿಗೆ ಬಂದಿದ್ದು, ಪ್ರಾಂಶುಪಾಲರ ಕೊಠಡಿಗೆ ತೆರಳಿ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಕ್ರೋಸಿನ್ ಸೇರಿ ಇತರೆ ಕೆಲ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಕಾಲೇಜಿನ ಕೊಠಡಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದರು. ಅವರನ್ನು ನೋಡಿದ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಪ್ರೊಪೆಸರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ಮುಂದು ವರಿದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾಂಶು ಪಾಲರು ಹಾಗೂ ಕಾಲೇಜಿನ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್‌ಒಡಿ ಸ್ಥಾನದಿಂದ ವಜಾಗೊಂಡಿದ್ದ ಪ್ರೊಫೆಸರ್:
ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ 2 ವರ್ಷ 8 ತಿಂಗಳಿಂದ ಇಂಗ್ಲಿಷ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ ಶಬಾನಾ ಅವರಿಗೆ ಕೆಲ ತಿಂಗಳ ಹಿಂದಷ್ಟೇ ವಿಭಾಗದ ಎಚ್‌ಒಡಿ ಆಗಿ ಬಡ್ತಿ ನೀಡಲಾಗಿತ್ತು. ಆದರೆ, ಸಹೋದ್ಯೋಗಿಗಳ ಬಗ್ಗೆ ಕೀಳಾಗಿ ಮಾತಾಡುವುದು ಹಾಗೂ ಕಾಲೇಜಿನ ಆಡಳಿತಾತ್ಮಕ ವಿಚಾರಗಳನ್ನು ಶಬಾನಾ ಬಹಿರಂಗ ಪಡಿಸುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಸಂಬಂಧ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ವಿಚಾರಣಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವಿವಿಧ ಮೂಲಗಳಿಂದ ಮಾಹಿತಿ ಪಡೆದುಕೊಂಡು, ಶಬಾನಾರನ್ನು ಎಚ್‌ಒಡಿ ಸ್ಥಾನದಿಂದ ವಜಾಗೊಳಿಸಿತ್ತು. ಅದರಿಂದ ಬೇಸರಗೊಂಡಿದ್ದ ಶಬಾನಾ, ಪ್ರಾಂಶುಪಾಲರು ಸೇರಿ ವಿಚಾರಣಾ ಸಮಿತಿಯ ಎಲ್ಲಾ ಸದಸ್ಯರ ವಿರುದ್ಧ ಆರೋಪಿಸಿ, ಕೆಲ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಕುರಿತು ಶಬಾನಾರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.