Advertisement

ಉಪ ನಗರ ರೈಲು ಸೇವೆ ಬಂದಷ್ಟೂ ಬೆಂಗಳೂರಿನ ಆಯುಷ್ಯ ಹೆಚ್ಚಿದಂತೆ 

01:12 PM Feb 03, 2018 | Team Udayavani |

ತುಂಬಿ ತುಳುಕುತ್ತಿರುವ ನಗರಗಳ ಬಗ್ಗೆ ಮಾತನಾಡುತ್ತಿರುವಾಗ ತುಂಬಿ ತುಳುಕುವ ರೈಲಿನ ಸದ್ದು ಕೇಳುತ್ತಿದೆ. ಕೊನೆಗೂ ಸರಕಾರಗಳು ಸಬ್‌ ಅರ್ಬನ್‌ ರೈಲು (ಉಪನಗರ) ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದು ಒಳ್ಳೆಯದೇ. ಇದರಿಂದ ನಮ್ಮ ಬೆಂಗಳೂರು ಇನ್ನಷ್ಟು ವರ್ಷ ಉಸಿರಾಡಲು ಅಡ್ಡಿ ಇಲ್ಲ. 

Advertisement

ನಮ್ಮ ವಾಹನಗಳ ನೋಂದಣಿ, ಅದರ ಆದಾಯದ ಕಥೆ ಹಾಗೂ ನಮ್ಮ ಸರಕಾರಗಳು ಅದಕ್ಕಾಗಿ ಕಾದು ಕುಳಿತುಕೊಳ್ಳುವ ಕಥೆ ಇನ್ನೂ ರೋಚಕ. ಜತೆಗೆ ಪಡೆದ ಆದಾಯಕ್ಕೆ ಪ್ರತಿಯಾಗಿ ನೂರರಷ್ಟು ಹೆಚ್ಚು ಖರ್ಚು ಮಾಡಬೇಕಾದ ಹೊಣೆಗಾರಿಕೆಯನ್ನು ಹೊತ್ತು ಮುಖ ಜೋತು ಹಾಕಿಕೊಂಡು ತಿರುಗುವ ಸರಕಾರಗಳ ಕಥೆ ಇನ್ನೂ ಶೋಚನೀಯ. ಇದು ಒಂದು ರೀತಿಯಲ್ಲಿ ಎರಡು ರೂ.ಗಳಿಸಲು ಹತ್ತು ರೂಪಾಯಿ ಕಳೆದುಕೊಂಡವರ ಕಥೆ. ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತರುವವರೆಗೆ ಈ ಸಮಸ್ಯೆಯಿಂದ ಖಂಡಿತಾ                   ಮುಕ್ತಿಯಿಲ್ಲ. 

ಸಾಮೂಹಿಕ ಸಾರಿಗೆ ವ್ಯವಸ್ಥೆ ಭವಿಷ್ಯದ ಅಗತ್ಯ ಎನ್ನುವುದಕ್ಕಿಂತಲೂ ಇಂದಿನ ತುರ್ತು ಎಂಬುದನ್ನು ಅರಿತು ಕಾಯೋನ್ಮುಖವಾಗಲೇಬೇಕಿದೆ. ಆಗಲಷ್ಟೇ ನಮ್ಮ ನಗರಗಳನ್ನು ಆರೋಗ್ಯವಂತವಾಗಿ ಉಳಿಸಿಕೊಳ್ಳಲು ಸಾಧ್ಯ. ಹಾಗೆ ನೋಡಿದರೆ ನಮ್ಮ ಸರಕಾರಗಳಿಗೆ ಬೆಳೆಯುತ್ತಿರುವ ನಗರಗಳ ಪ್ರಾಥಮಿಕ ಅಗತ್ಯ ಇವುಗಳೆಂದು ಇಂದೂ ಅನಿಸಿಲ್ಲ. ಬೆಂಗಳೂರನ್ನೇ ಉದಾಹರಣೆಯಾಗಿಟ್ಟುಕೊಳ್ಳೋಣ. ಸಬ್‌ ಅರ್ಬನ್‌ ರೈಲ್ವೇ ಪದ್ಧತಿ ಹೊಸದೇನೂ ಅಲ್ಲ. ಈಗಾಗಲೇ ಮುಂಬಯಿ, ಪುಣೆ, ದಿಲ್ಲಿ, ಹೈದರಾಬಾದ್‌, ಚೆನ್ನೈ ಸೇರಿದಂತೆ ಹಲವೆಡೆ ಸಬ್‌ ಅರ್ಬನ್‌ ರೈಲ್ವೆ (ಉಪನಗರಗಳ ಮಧ್ಯೆ) ಯಶಸ್ವಿಯಾಗಿ ನಡೆಯುತ್ತಿದೆ. ಯುರೋಪ್‌ ಮತ್ತು ಏಷ್ಯಾ ಖಂಡಗಳ ಬಹಳಷ್ಟು ರಾಷ್ಟ್ರಗಳಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಿದು. ಆದರೂ ನಾವು ಕಣ್ಣು ತೆರೆಯುವಾಗ ಜಗತ್ತಿಗೆ ಹಗಲೇ ಮುಗಿಯುವ ಹೊತ್ತಾಗಿತ್ತು. ಇದನ್ನು ಬರೀ ವಿಳಂಬ ಎನ್ನುವುದಿಲ್ಲ; ದೂರದೃಷ್ಟಿಯ ಕೊರತೆ ಎಂದೇ ಹೇಳಬಹುದು.

ಇದು ಮೆಟ್ರೋ ಅಲ್ಲ, ನಮ್ಮ ರೈಲು
2013-14ರ ಆಯವ್ಯಯದಲ್ಲಿ ಆಗಿನ ರಾಜ್ಯ ಸರಕಾರ ಸಬ್‌ ಅರ್ಬನ್‌ ರೈಲ್ವೆಯ ವಿಷಯವನ್ನು ಪ್ರಸ್ತಾಪಿಸಿತು. ಅನು ಮೋದನೆಯೂ ದೊರಕಿತು. ಬಳಿಕ ಆ ಯೋಜನೆಯ ಜಾರಿಯಲ್ಲಿ ಆಸಕ್ತಿ ಕಂಡು ಬರಲೇ ಇಲ್ಲ. ಅಷ್ಟರಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಿತ್ತು. ಸರಕಾರದ ಮನಸ್ಸು ಮತ್ತು ಅಧಿಕಾರಿಗಳ ಲೆಕ್ಕಾಚಾರ ಎಲ್ಲವೂ ಮೆಟ್ರೋ ಕಡೆಗೆ ತಿರುಗಿತು. ಇಲ್ಲಿ ಹೊಸದೊಂದು ಆಲೋಚನೆ ಮೊಳಕೆಯೊಡೆದು ಅಲ್ಲೇ ಒಣಗಿತು. ಬಹುಶಃ ಜಾರಿಗೊಂಡಿದ್ದರೆ ನಮ್ಮ ರೈಲು ಎಂದಾಗುತ್ತಿತ್ತೇನೋ? ಕಾರಣ, ನಮ್ಮ ಮೆಟ್ರೋ ಇದ್ದಂತೆ ನಮ್ಮ ರೈಲೆಂದುಕೊಳ್ಳೋಣ.

ಒಂದು ವೇಳೆ ಆಗಲೇ ಈ ರೈಲ್ವೇ ಪದ್ಧತಿ ನಮ್ಮಲ್ಲಿ ಜಾರಿಗೊಂಡಿದ್ದರೆ ಏನಾಗಿರಬಹುದಿತ್ತು? ಬೆಂಗಳೂರು ಇನ್ನಷ್ಟು ಕಾಲ ತನ್ನ ಹಳೆಯ ಸೌಂದರ್ಯವನ್ನೇ ಇಟ್ಟುಕೊಳ್ಳಬಹುದಿತ್ತು. ಉದ್ಯಾನ ನಗರಕ್ಕೆ ಪರಂಪರೆಯ ಶ್ರೀಮಂತಿಕೆಯೂ ಹೆಸರು ತಂದು ಕೊಟ್ಟಿತ್ತು. ಹಸಿರು ರಾಶಿ, ಆಹ್ಲಾದಕರ ವಾತಾವರಣ, ಸದಾ ತಂಪಾದ ಹವಾ, ವಾಹನಗಳಿಂದ ಕಿಕ್ಕಿರಿದು ತುಂಬಿರದ ರಸ್ತೆಗಳು, ಪಾರ್ಕಿಂಗ್‌ಗಾಗಿ ಅಲೆದಾಡುತ್ತಿರುವ ಅಥವಾ ಗಿರಕಿ ಹೊಡೆ ಯುತ್ತಿರುವ ವಾಹನಗಳ ಸಾಲು, ವಾಯು  ಮಾಲಿನ್ಯ, ಎಲ್ಲೆಲ್ಲೂ ಕಾಣಸಿಗುವ ಕಾಂಕ್ರೀಟಿನ ಮೇಲ್ಸೇತುವೆಗಳು-ಇವುಗಳಾವುದೂ ಇರುತ್ತಿರಲಿಲ್ಲ. ಇದರ ಬದಲು ಚೆಂದದ ಬೆಂಗಳೂರು ಇರುತ್ತದೆಂದುಕೊಳ್ಳೋಣ. ಯಾಕೆಂದರೆ, ಒಂದು ಸಬ್‌ ಅರ್ಬನ್‌ ರೈಲ್ವೆ ಇಡೀ ನಗರವನ್ನು ಬದುಕಿಸಬಹುದು.

Advertisement

ಎಲ್ಲ ನಗರಗಳ ಲೈಫ್ ಲೈನ್‌
ಮುಂಬಯಿಯ ಜೀವನಾಡಿಯೆಂದರೆ (ಲೈಫ್ ಲೈನ್‌) ಸಬ್‌ ಅರ್ಬನ್‌ ರೈಲು. ಪಶ್ಚಿಮ ಮತ್ತು ಕೇಂದ್ರ ರೈಲ್ವೆ ಇದನ್ನು ನಿರ್ವಹಿಸುತ್ತಿದ್ದು, ಸುಮಾರು 465 ಕಿ.ಮೀ ವ್ಯಾಪ್ತಿಯಲ್ಲಿ ಸೌಲಭ್ಯ ಕಲ್ಪಿಸುತ್ತಿದೆ. ಬಸ್ಸಿನ ವ್ಯವಸ್ಥೆ ಇದ್ದರೂ ಜನರು ಎಲ್ಲದಕ್ಕೂ ಅವಲಂಬಿಸಿರುವುದು ರೈಲನ್ನೇ. ನಿತ್ಯವೂ ಕನಿಷ್ಠ 80 ಲಕ್ಷ ಮಂದಿ ಸಂಚರಿಸುತ್ತಾರೆ. ದಿನವೂ ಬೆಳಗ್ಗೆ 7 ರಿಂದ 11.30 ಹಾಗೂ ಸಂಜೆ 5 ರಿಂದ ರಾತ್ರಿ 9.30ರವರೆಗೂ ಎಲ್ಲ ಮಾರ್ಗಗಳ ರೈಲುಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ರಾತ್ರಿ 4 ತಾಸು ಮಾತ್ರ ಈ ರೈಲುಗಳಿಗೆ ವಿಶ್ರಾಂತಿ. ಉಳಿದಂತೆ ಇಡೀ ದಿನ ಓಡುತ್ತಲೇ ಇರುತ್ತವೆ. ಸಾಮಾನ್ಯವಾಗಿ ಒಂಬತ್ತು ಬೋಗಿಗಳಿರುವ ಒಂದು ರೈಲಿನಲ್ಲಿ ಒಮ್ಮೆ 1,700 ಮಂದಿ ಆರಾಮಾಗಿ ಸಾಗಬಹುದು. ಆದರೆ ಈ ಪೀಕ್‌ ಅವರ್‌ (ಜನದಟ್ಟಣೆಯ) ಸಂದರ್ಭದಲ್ಲಿ ಸುಮಾರು 4,500 ಮಂದಿ ಸಂಚರಿಸುತ್ತಾರೆ. 

ಬೆಂಗಳೂರಿನ ಹಲವೆಡೆಗೆ ನೈರುತ್ಯ ರೈಲ್ವೆ ಸುಮಾರು 94 ಉಪನಗರ ರೈಲುಗಳ ಸೇವೆ ಒದಗಿಸಿದೆ. ಇದರಲ್ಲಿ 15ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿರುವುದು ವೈಟ್‌ಫೀಲ್ಡ್‌ ಕಡೆಗೆ. ಜನದಟ್ಟಣೆ ಹೆಚ್ಚಿರುವ ಹೊತ್ತಿಗೇ ಈ ಸೇವೆ ನಿಯೋಜನೆ. ಒಂದು ರೈಲು ಒಂದು ಬಾರಿಗೆ ಎರಡು ಸಾವಿರ ಜನರನ್ನು ಕರೆದೊಯ್ಯಬಲ್ಲದು. ಅಂದರೆ 60 ಸಾವಿರ ಮಂದಿಗೆ ಇದು ಜೀವನಾಡಿ. ಅಂದಹಾಗೆ ನಿತ್ಯವೂ ಬೆಂಗಳೂರಿನ ವಿವಿಧೆಡೆಯಿಂದ ವೈಟ್‌ಫೀಲ್ಡ್‌ ಕಡೆಗೆ ಉದ್ಯೋಗಕ್ಕೆಂದು ತೆರಳುವ ಮಂದಿ ಅಂದಾಜು 4 ಲಕ್ಷ. ಈ ಭಾಗಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೇ ಸುಮಾರು 330 ಬಸ್‌ಗಳನ್ನು (2,300ಕ್ಕೂ ಹೆಚ್ಚು ಅನುಸೂಚಿ) ನಿಯೋಜಿಸಿದೆ. ಇದರಲ್ಲಿ ಒಟ್ಟು ಸಂಚರಿಸುವ ಪ್ರಯಾಣಿಕರ ಸಂಖ್ಯೆ ಅಂದಾಜು 90 ಸಾವಿರ. ಇಷ್ಟೆಲ್ಲಾ ಆದಮೇಲೂ, ಸಬ್‌ ಅರ್ಬನ್‌ ಮತ್ತು ಬಸ್ಸು ಸೇವೆ ಮೂಲಕ ಒದಗಿಸುವ ಸಾಮೂಹಿಕ ಸಾರಿಗೆ ವ್ಯವಸ್ಥೆ ಕೇವಲ 1.50 ಲಕ್ಷ ಮಂದಿಗೆ. ಹಾಗಾದರೆ ಇನ್ನೂ 2.5 ಲಕ್ಷ ಮಂದಿ ಹೇಗೆ ಸಂಚರಿಸುತ್ತಿದ್ದಾರೆ ಎಂದು ಊಹಿಸಿಕೊಳ್ಳಿ.

ಅದಕ್ಕೇ ಬೇಕು ರೈಲು 
ಹಾಗಾಗಿಯೇ ಬೆಂಗಳೂರಿನ ನಾಗರಿಕರೂ ಸಬ್‌ ಅರ್ಬನ್‌ ರೈಲು ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವಾಗಬಹುದು ಎಂದು ಆಗ್ರಹಿಸಿದ್ದು. ಈಗ ನಿಧಾನವಾಗಿ ಸರಕಾರವೂ ಎಚ್ಚೆತ್ತುಕೊಂಡಿರುವುದು ಸ್ಪಷ್ಟ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ ಸಬ್‌ ಅರ್ಬನ್‌ ರೈಲ್ವೇ ಯೋಜನೆಗೆ 345 ಕೋಟಿ ರೂ.ಗಳನ್ನು ಮೀಸಲಿರಿಸಿತು. ಬಳಿಕ ಆಗಿನ ಕೇಂದ್ರ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರೂ ಬೆಂಗಳೂರಿಗೆ ಬಂದಿದ್ದಾಗ ಯೋಜನೆಯ ಜಾರಿ ಕುರಿತು ಆಸಕ್ತಿ ತೋರಿದ್ದರು. ರಾಜ್ಯ ಮತ್ತು ಕೇಂದ್ರ ಸರಕಾರದ ಜಂಟಿ ಯೋಜನೆಯಾಗಿತ್ತು. ಬಳಿಕ, ಕೇಂದ್ರ ರೈಲ್ವೇ ಸಚಿವರು ಬದಲಾದರೂ, ಯೋಜನೆಗೆ ಅಷ್ಟೊಂದು ಹಿನ್ನಡೆಯಾದಂತೆ ತೋರುತ್ತಿಲ್ಲ. ಯಾಕೆಂದರೆ, ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಮಂಡಿಸಿದ ಬಜೆಟ್‌ನಲ್ಲಿ ಇದೇ ಯೋಜನೆಗೆ ಕೇಂದ್ರವು 17 ಸಾವಿರ ಕೋಟಿ ರೂ.ಗಳನ್ನು ಪ್ರಕಟಿಸಿದೆ. ಎರಡು ದಿನಗಳ ಹಿಂದೆಯಷ್ಟೇ ರಾಜ್ಯ ಸಚಿವ ಸಂಪುಟವೂ ಈ ಯೋಜನೆಯ ಮೊದಲ ಹಂತದ ಜಾರಿಗೆ ಅನುಮೋದನೆ ನೀಡಿತ್ತು. ಈಗ ಕೇಂದ್ರ ಸರಕಾರ ಶೇ. 80ರಷ್ಟು ಹಣ ಹೂಡಿಕೆ ಮಾಡಿದರೆ, ಉಳಿದ ಬಾಬ¤ನ್ನು ರಾಜ್ಯ ಸರಕಾರ ಭರಿಸುತ್ತಿದೆ. ಬೆಂಗಳೂರಿಗರ ನೆಲೆಯಲ್ಲಿ ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಯೋಜನೆ ನಿಗದಿತ ಕಾಲಾವಧಿಯೊಳಗೆ ಮುಗಿದರೆ ಮೂರು ವರ್ಷಗಳಲ್ಲಿ ಬೆಂಗಳೂರಿನ ಹಸಿರು ಹೆಚ್ಚಾಗಬಹುದು. ಸುಮಾರು 160 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಈ ರೈಲು ವ್ಯವಸ್ಥೆ ಇಡೀ ನಗರದ ಆರೋಗ್ಯವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಬಗ್ಗೆ ಯಾವುದೇ ಅನುಮಾನವಿಲ್ಲ.

ರೈಲು ಬಂದರೆ ದೊಡ್ಡದೇ?
ಇಂಥದೊಂದು ಪ್ರಶ್ನೆ ಏಳುವುದು ಅತ್ಯಂತ ಸಹಜವಾದುದೇ. ನಗರದೊಳಗೆ ರೈಲು ಹರಿದಾಡಿದರೆ ಬಹಳ ದೊಡ್ಡದೇ. ಇದರಿಂದ ಬರೀ ಟ್ರಾಫಿಕ್‌ ಸುಧಾರಣೆಯಷ್ಟೇ ಆಗುವುದಿಲ್ಲ. ಇದರಿಂದ ನೇರ ಲಾಭವಾಗುವುದು ನಗರಗಳಲ್ಲಿರುವ ಮೇಲ್ಮಧ್ಯಮ-ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರಿಗೆ. ಅವರು ತಮ್ಮ ದುಡಿಮೆಗೆ ನಿತ್ಯವೂ ಹೂಡುವ ಹೂಡಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಅದು ಉಳಿತಾಯವಾಗಿ ಮಾರ್ಪಡುತ್ತದೆ.  ಉದಾಹರಣೆಗೆ ಒಬ್ಬ ವ್ಯಕ್ತಿ ತಾನು ವಾಸಿಸುವ ಸ್ಥಳದಿಂದ ಉದ್ಯೋಗದ ಸ್ಥಳವನ್ನು ನಿಗದಿತ ಸಮಯದಲ್ಲಿ ತಲುಪಲು ವ್ಯಯಿಸುವ ಸಮಯ ಹಾಗೂ ಹಣದಲ್ಲಿ ಆಗುವ ಉಳಿತಾಯ ದೊಡ್ಡದು. ತಿಂಗಳಿಗೆ ಹತ್ತು ಸಾವಿರ ರೂ. ಗಳಿಸುವ ವ್ಯಕ್ತಿ ಪ್ರಯಾಣಕ್ಕೆಂದು 1 ರಿಂದ 1,500ರೂ. ವೆಚ್ಚ ಮಾಡುತ್ತಿರುತ್ತಾನೆಂದುಕೊಳ್ಳೋಣ. ಅದರಲ್ಲಿ ಶೇ.30ರಷ್ಟು ಉಳಿತಾಯವಾದರೂ, 400ರೂ. ಉಳಿದಂತೆ. ಅದು ಆ ಕುಟುಂಬಕ್ಕೆ ಬಲು ದೊಡ್ಡದೇ. ಮುಂಬಯಿಯ ಸಬ್‌ ಅರ್ಬನ್‌ ರೈಲು ವ್ಯವಸ್ಥೆ ಇಂಥ ಎಷ್ಟು ಕುಟುಂಬಗಳಿಗೆ ಆಧಾರವಾಗಿದೆಯೋ ಏನೋ? ಬರೀ 200 ರೂ.ಯಲ್ಲಿ ಒಂದಿಡೀ ತಿಂಗಳು ಪ್ರಯಾಣಿಸುವ ಲಕ್ಷಗಟ್ಟಲೆ ಮಂದಿಯಿದ್ದಾರೆ ಅಲ್ಲಿ. ಅದಕ್ಕೇ ಮುಂಬಯಿಯ ಲೈಫ್ ಲೈನ್‌ ಎಂಬ ಖ್ಯಾತಿ ಅದಕ್ಕೆ. 

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next