ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರು ಬೆಂಗಳೂರಿನಲ್ಲಿದ್ದರೂ ವಿಜಯನಗರದ “ಹಂಪಿ’ಯಲ್ಲಿಯೇ ನೆಲೆಸಿದ್ದರು! ಹೌದು, ಡಾ.ಚಿ.ಮೂ. ಅವರ ನೆಚ್ಚಿನ ತಾಣ ಹಂಪಿ. ಹಾಗಾಗಿ, ಅತಿ ಹೆಚ್ಚು ಅವರು ಸಂಶೋಧನೆ ನಡೆಸಿದ್ದೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಕುರಿತು. ಅಷ್ಟೇ ಯಾಕೆ, ಬೆಂಗಳೂರಿನಲ್ಲಿ ಅವರು ತಮ್ಮ ಕೊನೇ ದಿನಗಳವರೆಗೆ ವಾಸವಿದ್ದದ್ದೂ ಅದೇ ವಿಜಯನಗರದ “ಹಂಪಿ’ನಗರದಲ್ಲಿ ಎನ್ನುವುದು ವಿಶೇಷ.
ಪಾರಂಪರಿಕ ತಾಣ ಹಂಪಿಯ ಸಂರಕ್ಷಣೆಯಲ್ಲಿ ಡಾ.ಚಿ ಮೂ ಅವರ ಕೊಡುಗೆ ಅಪಾರ. ಉತನನದ ಮೂಲಕ ಎಷ್ಟೋ ಸಂಗತಿಗಳ ಮೇಲೆ ಅವರು ಬೆಳಕುಚೆಲ್ಲಿದರು. ಸಂಶೋಧನಾ ಪ್ರಬಂಧಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಮಹತ್ವವನ್ನು ಪಸರಿಸಿದರು. ಅವರ ನೆಚ್ಚಿನ ತಾಣವೂ ಅದಾಗಿತ್ತು. ವರ್ಷಕ್ಕೊಮ್ಮೆಯಾದರೂ ಅಲ್ಲಿಗೆ ಹೋಗಿಬರುತ್ತಿದ್ದರು.
ಅಷ್ಟೇ ಅಲ್ಲ, ಬೆಂಗಳೂರಿನಲ್ಲೂ ವಿಜಯನಗರದ ಹಂಪಿನಗರದಲ್ಲೇ ನೆಲೆಸಿದ್ದರು. ಹಂಪಿ ಉತ್ಸವದ ಹಿಂದಿನ ರೂವಾರಿಯಾಗಿದ್ದರು. ಈಗ ಆ ಉತ್ಸವಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಚಿಮೂ ಮಾತ್ರ ಇಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದರು.
“ಕಲ್ಯಾಣ ಕರ್ನಾಟಕ’ದ ಪರಿಕಲ್ಪನೆ: ಹೈದರಾಬಾದ್ ಕರ್ನಾಟಕವು ಬಸವಣ್ಣ ಓಡಾಡಿದ ಜಾಗ. ಅಷ್ಟೇ ಅಲ್ಲ, ಕಲ್ಯಾಣ ಕ್ರಾಂತಿ ಆಗಿದ್ದೂ ಅಲ್ಲಿಯೇ. ಹಾಗಾಗಿ, ಹೈದರಾಬಾದ್ ಕರ್ನಾಟಕದ ಬದಲಿಗೆ “ಕಲ್ಯಾಣ ಕರ್ನಾಟಕ’ ಎಂದು ಘೋಷಿಸಿ, ಆ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎಂದು ಹಲವು ಬಾರಿ ಸರ್ಕಾರಗಳನ್ನು ಚಿ.ಮೂ. ಒತ್ತಾಯಿಸಿದ್ದರು. ಈಚೆಗೆ ಅದು ಸಾಕಾರಗೊಂಡಿದೆ.
ನಾಡು ಕಂಡ ಅಗ್ರಮಾನ್ಯ ಸಂಶೋಧಕರಲ್ಲಿ ಡಾ.ಚಿಮೂ ಒಬ್ಬರು.ಆದರೆ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರು ಆಯ್ಕೆಯಾಗದಿರುವುದು ದುರಂತ. ಈ ಹಿಂದೆ ಭಾಷಣ ವೊಂದರಲ್ಲಿ ಸ್ವತಃ ಚಿಮೂ ಸಮ್ಮೇಳ ನಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದರೂ ತಾವು ಅದಕ್ಕೆ ಒಪ್ಪುವುದಿಲ್ಲ ಎಂದು ಹೇಳಿದ್ದರು. ಬಹುಶಃ ಇದೇ ಕಾರಣಕ್ಕೆ ಅವರ ಹೆಸರು ಕೊನೆವರೆಗೂ ಕೇಳಿಬರಲಿಲ್ಲ ಎಂದು ಪರಿಷತ್ತಿನ ಮೂಲಗಳು ತಿಳಿಸಿವೆ. ಅಂದ ಹಾಗೆ ಮುಂಬೈ ಕರ್ನಾಟಕವನ್ನು “ಕಿತ್ತೂರು ಕರ್ನಾಟಕ’ವನ್ನಾಗಿ ಅಭಿವೃದ್ಧಿಪಡಿಸುವುದೂ ಚಿಮೂ ಅವರ ಕನಸಾಗಿತ್ತು.