Advertisement

ಅಕ್ಕಿ ಬದಲು ಹಣ ಕೊಟ್ಟರೂ 20 ಸಾವಿರ ಮೆಟ್ರಿಕ್ ಟನ್‌ ಖರೀದಿ ಅನಿವಾರ್ಯ

05:01 PM Jun 30, 2023 | Pranav MS |

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿದ್ದ 5 ಕೆಜಿ ಅಕ್ಕಿ ಬದಲಿಗೆ ಫ‌ಲಾನುಭವಿಗಳಿಗೆ ಹಣ ನೀಡಲು ನಿರ್ಧರಿಸಿದ್ದರೂ ಸರಕಾರ ಅಂದಾಜು 20 ಸಾವಿರ ಮೆಟ್ರಿಕ್‌ ಟನ್‌ಗೆ ಪರ್ಯಾಯ ವ್ಯವಸ್ಥೆ ಮಾಡಲೇಬೇಕಾಗಿದೆ.

Advertisement

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾದ ಅಕ್ಕಿ ಮಾಸಿಕ 2,17,400 ಮೆಟ್ರಿಕ್‌ ಟನ್‌. ಆದರೆ ರಾಜ್ಯದಲ್ಲಿರುವ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಗಳ ಅಂಕಿ-ಅಂಶಗಳ ಪ್ರಕಾರ ಮಾಸಿಕ 2.36 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಅಗತ್ಯವಿದೆ. ನೂರಕ್ಕೆ ನೂರರಷ್ಟು ಪಡಿತರ ವಿತರಣೆಯಾದಲ್ಲಿ ಸುಮಾರು 20 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಕೊರತೆ ಆಗಲಿದೆ. ಇದನ್ನು ಹೊಂದಿಸಬೇಕಾದ ಹೊಣೆ ಈಗ ರಾಜ್ಯ ಸರಕಾರದ ಮೇಲಿದೆ.

ಕೊರತೆ ಆಗಲಿರುವ ಈ ಅಕ್ಕಿ ಬದಲಿಗೆ ಹಣ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಈ ಫ‌ಲಾನುಭವಿಗಳು ಈಗಾಗಲೇ ನೀಡುತ್ತಿರುವ 5 ಕೆಜಿ ಅಕ್ಕಿ ಪಡೆಯುವ ವರ್ಗವೇ ಆಗಿದೆ. ಈ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಕಡಿಮೆ ಆಗಬಹುದಾದ ಅಕ್ಕಿ ಹೊಂದಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಈ ಹಿಂದಿನ ಹೊಂದಾಣಿಕೆ ಹೊರೆಗೆ ಹೋಲಿಸಿದರೆ, ಈ ಕೊರತೆ ಏನೂ ಅಲ್ಲ. ಹಾಗಂತ ಉದಾಸೀನ ಮಾಡುವಂತೆಯೂ ಇಲ್ಲ. ಈ ನಿಟ್ಟಿನಲ್ಲಿ ಹಲವು ಆಯ್ಕೆಗಳು ಸರಕಾರದ ಮುಂದಿವೆ. ಕೊರತೆಯಾಗುವ ಅಕ್ಕಿಯನ್ನು ಗಿರಣಿ ಮಾಲಕರಿಂದ ನೇರವಾಗಿ ಖರೀದಿಸಬಹುದು. ಈಗಾಗಲೇ ಛತ್ತೀಸ್‌ಗಢ 1.50 ಲಕ್ಷ ಮೆಟ್ರಿಕ್‌ ಟನ್‌ ನೀಡಲು ಮುಂದೆ ಬಂದಿದೆ ಎಂದು ಸ್ವತಃ ಸರಕಾರ ಹೇಳಿತ್ತು. ಅಲ್ಲಿಂದಲೂ ಪೂರೈಕೆ ಮಾಡಿಕೊಳ್ಳಬಹುದು. ಅಕ್ಕಿ ಬದಲಿಗೆ ಗ್ರಾಹಕರಿಗೆ ಜೋಳ, ರಾಗಿ ನೀಡಬಹುದು ಅಥವಾ ಭಾರತೀಯ ಆಹಾರ ನಿಗಮ (ಎಫ್ಸಿಐ)ದಿಂದ ತನ್ನ ಹಂಚಿಕೆಯಲ್ಲಿ ಕೊರತೆಯಾಗುವ ಅಕ್ಕಿಯನ್ನು ಮುಂಚಿತವಾಗಿ ಪಡೆಯಬಹುದು.

ಕೊರತೆ ಇದೆ; ಖರೀದಿಸುತ್ತೇವೆ
ಕೇಂದ್ರದ ಹಂಚಿಕೆ ಮತ್ತು ಅಗತ್ಯವಿರುವ ಅಕ್ಕಿಯ ಪ್ರಮಾಣದಲ್ಲಿ ಸುಮಾರು 19-20 ಸಾವಿರ ಮೆಟ್ರಿಕ್‌ ಟನ್‌ ಅಂತರ ಇರುವುದು ನಿಜ. ಆದರೆ ಅದನ್ನು ಕೇಂದ್ರೀಯ ಭಂಡಾರ, ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್ಇಡಿ), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್)ಗಳ ಮೂಲಕ ಖರೀದಿಸಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತೆ ಎಂ. ಕನಕವಲ್ಲಿ “ಉದಯವಾಣಿ’ಗೆ ತಿಳಿಸಿದರು.

Advertisement

ಲೆಕ್ಕಾಚಾರ ಹೀಗಿದೆ
ಅಂತ್ಯೋದಯ ಕಾರ್ಡ್‌ ಹೊಂದಿದ 10,89,990 ಕುಟುಂಬಗಳಿದ್ದು, ಇವುಗಳಲ್ಲಿ 44,77,119 ಸದಸ್ಯರಿದ್ದಾರೆ. ಅದೇ ರೀತಿ ಆದ್ಯತಾ ಕುಟುಂಬ (ಬಿಪಿಎಲ್‌)ಗಳಲ್ಲಿ 3,97,00,791 ಸದಸ್ಯರಿದ್ದಾರೆ. ಒಟ್ಟಾರೆ ಫ‌ಲಾನುಭವಿಗಳ ಸಂಖ್ಯೆ 4,41,77,910. ಪ್ರಸ್ತುತ ತಲಾ ಅಂತ್ಯೋದಯ ಕುಟುಂಬಕ್ಕೆ 35 ಕೆಜಿ ಹಾಗೂ ಬಿಪಿಎಲ್‌ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಅದರಂತೆ 2,36,653 ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗುತ್ತದೆ. ಕೇಂದ್ರದ ಹಂಚಿಕೆ 2,17,400 ಮೆಟ್ರಿಕ್‌ ಟನ್‌ ಆಗಿದೆ. ಆದರೆ ಪ್ರತಿ ತಿಂಗಳು ಪ್ರತಿಶತ ನೂರರಷ್ಟು ಪಡಿತರ ವಿತರಣೆ ಆಗುವುದಿಲ್ಲ. ಶೇ. 90ರಿಂದ 95ರಷ್ಟು ಮಾತ್ರ ಆಗುತ್ತದೆ. ಉಳಿದ ಶೇ. 5ರಷ್ಟು ಬಾಕಿ ಉಳಿಯುವುದರಿಂದ ಅಲ್ಲಿ ತುಸು ಪಡಿತರ ಉಳಿತಾಯ ಆಗುತ್ತದೆ. ಈ ಮೂಲಕವೂ ಸ್ವಲ್ಪ ಹೊಂದಾಣಿಕೆ ಆಗುತ್ತದೆ ಎನ್ನಲಾಗಿದೆ.

ವಿಜಯ ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next