Advertisement

ನಿಗಮದ ಬಾಗಿಲಿಗೆ ಹೋದರೂ ವಿದ್ಯಾರ್ಥಿಗಳಿಗೆ ಕೊಡ್ತಿಲ್ಲ ಪಾಸು

12:28 PM Sep 30, 2018 | Team Udayavani |

ಬೆಂಗಳೂರು: “ಈ ಬಾರಿ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಬಸ್‌ ಪಾಸು ಬರಲಿದೆ’ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೇಳಿತ್ತು. ಆದರೆ, ಈಗ ನಿತ್ಯ ಸ್ವತಃ ವಿದ್ಯಾರ್ಥಿಗಳು ನಿಗಮದ ಬಾಗಿಲು ತಟ್ಟುತ್ತಿದ್ದರೂ ಪಾಸು ಸಿಗುತ್ತಿಲ್ಲ!

Advertisement

ಶೈಕ್ಷಣಿಕ ವರ್ಷದ ಮೊದಲ ಮೂರು ತಿಂಗಳು ಮುಗಿಯುತ್ತಿದ್ದರೂ ಪಾಸು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು ಶಾಲೆ ಬಿಟ್ಟು, ಬಿಎಂಟಿಸಿ ಬಾಗಿಲು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ 6 ಗಂಟೆಯಿಂದ ವಿದ್ಯಾರ್ಥಿಗಳು ಕ್ಯೂನಲ್ಲಿ ನಿಂತರೂ ಎರಡು-ಮೂರು ತಾಸು ಕಾಯಬೇಕಾಗಿದೆ ಎಂದು ನಿಗಮಕ್ಕೆ ಪೋಷಕರು ಹಿಡಿಶಾಪ ಹಾಕುತ್ತಿದ್ದಾರೆ.

ಫೋಟೋ, ವಿಳಾಸ ಮತ್ತಿತರ ತಾಂತ್ರಿಕ ದೋಷ ಕಂಡುಬಂದವರಿಗೆ ಮೊಬೈಲ್‌ ಮೂಲಕ ಬಿಎಂಟಿಸಿ ಸಂದೇಶ ಕಳುಹಿಸಿ, ಮೆಜೆಸ್ಟಿಕ್‌ನಲ್ಲಿರುವ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಭೇಟಿ ನೀಡುವಂತೆ ಸೂಚಿಸಿದೆ. ಅಲ್ಲಿಗೆ ಹೋದರೆ, ಮೆಜೆಸ್ಟಿಕ್‌ ಗೊಂದಲದ ಗೂಡಾಗುತ್ತದೆ. ಕಳೆದ ಹತ್ತು ದಿನಗಳಿಂದ ಈ ಸಮಸ್ಯೆ ಕಂಡುಬರುತ್ತಿದ್ದು, ಇನ್ನೂ 10ರಿಂದ 15 ದಿನಗಳು ಈ ಗೋಳು ತಪ್ಪಿದ್ದಲ್ಲ ಎನ್ನಲಾಗಿದೆ.

ಆರಂಭದಲ್ಲಿ ಮೆಜೆಸ್ಟಿಕ್‌ ಕೌಂಟರ್‌ನಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಪಾಸು ವಿತರಣೆ ಅಥವಾ ಲೋಪದೋಷ ಸರಿಪಡಿಸಲಾಗುತ್ತಿತ್ತು. ಆದರೆ, ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಫ್ಟ್ವೇರ್‌ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈಗ ನಿತ್ಯ 4,000ರಿಂದ 4,500 ಪಾಸುಗಳ ವಿತರಣೆ ಮಾಡಲಾಗುತ್ತಿದೆ. ಆದಾಗ್ಯೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. 

ಇಡೀ ಬೆಂಗಳೂರಿಗೆ ಒಂದೇ ಕೌಂಟರ್‌: ಇಡೀ ಬೆಂಗಳೂರಿನಲ್ಲಿ ಒಟ್ಟು 47 ಡಿಪೋಗಳಿವೆ. ನಾಲ್ಕು ಸ್ಯಾಟಲೈಟ್‌ ಬಸ್‌ ನಿಲ್ದಾಣಗಳಿವೆ. ಮೂರು ಲಕ್ಷ ಪಾಸುಗಳನ್ನು ವಿತರಿಸಬೇಕಿದ್ದು, ಈ ಪೈಕಿ ಇನ್ನೂ ಒಂದು ಲಕ್ಷ ಬಾಕಿ ಇದೆ. ಆದರೆ, ಪಾಸು ವಿತರಣೆ ಕೌಂಟರ್‌ ಮಾತ್ರ ಒಂದೇ ಒಂದು! ಆರಂಭದಲ್ಲಿ ಒಂದೆರಡು ದಿನಗಳು 500ರಿಂದ ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಸಂದೇಶ ಕಳುಹಿಸಲಾಗಿತ್ತು.

Advertisement

ಇದಕ್ಕೆ ಸ್ಪಂದಿಸಿ ಭೇಟಿ ನೀಡುವ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಹಾಗಾಗಿ, ನಂತರದಿಂದ ಸಂದೇಶ ಕಳುಹಿಸುವ ಸಂಖ್ಯೆ ದುಪ್ಪಟ್ಟುಗೊಳಿಸಲಾಯಿತು. ಒಮ್ಮೆಲೆ ಅವರೆಲ್ಲರೂ ಭೇಟಿ ನೀಡಿದ್ದರಿಂದ ಗೊಂದಲ ಉಂಟಾಯಿತು ಎಂದು ಮೆಜೆಸ್ಟಿಕ್‌ ಕೌಂಟರ್‌ ಸಿಬ್ಬಂದಿಯೊಬ್ಬರು ತಿಳಿಸಿದರು. 

ಈ ಮಧ್ಯೆ ಶನಿವಾರದಿಂದ ಶಾಂತಿನಗರದಲ್ಲಿ ಮತ್ತೂಂದು ಕೌಂಟರ್‌ ತೆರೆಯಲಾಗಿದ್ದು, ಮೊದಲ ದಿನ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಾಸು ವಿತರಣೆ ಮಾಡಲಾಗಿದೆ. ಈ ಸಾಮರ್ಥ್ಯವನ್ನು ಕೂಡ ಹೆಚ್ಚಿಸುವ ಉದ್ದೇಶ ಇದೆ. ಇವೆರಡು ಕೌಂಟರ್‌ಗಳಲ್ಲೇ ನಿಭಾಯಿಸಲು ಬಿಎಂಟಿಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 

ಆರಂಭದಿಂದಲೂ ಪಾಸು ಗೊಂದಲಮಯವಾಗಿದೆ. ಮೊದಲು ಉಚಿತ ಪಾಸು ನೀಡುವುದಾಗಿ ಸರ್ಕಾರ ಹೇಳಿತ್ತು. ಈ ಮಧ್ಯೆ ಬಿಎಂಟಿಸಿ ಸ್ಮಾರ್ಟ್‌ಕಾರ್ಡ್‌ ಕೊಡುವುದಾಗಿ ಹೇಳಿತು. ಆಯಾ ಶಾಲೆಗಳಲ್ಲೇ ಪಡೆಯಿರಿ ಎಂದಿತು. ಮತ್ತೂಮ್ಮೆ ಅಂಚೆ ಮೂಲಕ ನಿಮ್ಮ ಮನೆಗೇ ತಲುಪಿಸುವುದಾಗಿ ಘೋಷಿಸಿತ್ತು.

ಮತ್ತೆ ಈಗ ನಿಗಮದ ಕೆಂಪೇಗೌಡ ನಿಲ್ದಾಣಕ್ಕೆ ಬಂದು ಪಡೆಯಿರಿ ಎಂದು ಸಂದೇಶ ಕಳುಹಿಸುತ್ತಿದೆ. ಮತ್ತೂಂದೆಡೆ ಯಾವುದಾದರೂ ಮಾಹಿತಿಗೆ “mybmtc.com’ ಸಂಪರ್ಕಿಸಲು ಹೇಳುತ್ತಾರೆ. ಆದರೆ, ವೆಬ್‌ಸೈಟ್‌ ಯಾವಾಗಲೂ ಬ್ಯುಸಿಯಾಗಿರುತ್ತದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

“ಪಾಸು ಪಡೆಯುವ ದಿನ ನೀವೇ ಹೇಳಿ’: ಈ ಮಧ್ಯೆ ವಿದ್ಯಾರ್ಥಿಗಳು ಸ್ವತಃ ತಾವೇ ಪಾಸು ಪಡೆಯುವ ದಿನಾಂಕ ನಿಗದಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಅದರಂತೆ ವಿದ್ಯಾರ್ಥಿಗಳು ಪಾಸಿಗಾಗಿ ನಿಗಮದ ವೆಬ್‌ಸೈಟ್‌: www.mybmtc.comಗೆ ತೆರಳಿ ಟ್ರ್ಯಾಕ್‌ ಸ್ಟೂಡೆಂಟ್‌ ಬಸ್‌ ಪಾಸ್‌ ಸ್ಟೇಟಸ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಅಲ್ಲಿ ಪಾಸು ಪಡೆಯುವ ಸ್ಥಳ, ದಿನಾಂಕ ಮತ್ತು ಸಮಯ ಸೂಚಿಸಬೇಕು. ಅದರ ಪ್ರಕಾರ ನಿಗದಿತ ಸಮಯಕ್ಕೆ ಬಸ್‌ ನಿಲ್ದಾಣಕ್ಕೆ ಆಗಮಿಸಿ, ಪಾಸು ಪಡೆಯಬೇಕು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next