ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆದೇಶ ನೀಡಿದ ಬೆನ್ನಲ್ಲೇ ಗವರ್ನರ್ ಆದೇಶವನ್ನು ಪ್ರಶ್ನಿಸಿ ಶಿವಸೇನಾ ಬುಧವಾರ (ಜೂನ್ 29) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ:Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ
ಬಂಡಾಯ ಶಾಸಕರ ಅರ್ಜಿ ವಿಚಾರಣೆ ನಡೆಸುವ ಮುನ್ನವೇ ಗವರ್ನರ್ ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವುದು ಕಾನೂನು ಬಾಹಿರವಾಗಿದೆ. ಈ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಭಿಷೇಕ್ ಸಿಂಘ್ವಿ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಪೀಠ, ಇಂದು ಸಂಜೆ 5ಗಂಟೆಗೆ ಗವರ್ನರ್ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ.
ಬಂಡಾಯವೆದ್ದ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗದೇ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಶಿವಸೇನಾ ಸ್ಪಷ್ಟಪಡಿಸಿದೆ. ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿಯೇ ಕ್ರಮ ಕೈಗೊಂಡಿದ್ದೇವೆ. ನಾನು ಕಾನೂನು ಬದ್ಧವಾಗಿ ಹೋರಾಡುತ್ತಿದ್ದೇವೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ಅವರು ಶಿವಸೇನಾ ಶಾಸಕರನ್ನು ಬಿಡುಲು ಸಿದ್ಧರಾಗಿದ್ದಾರೆ, ಆದರೆ ಶರದ್ ಪವಾರ್ ಮತ್ತು ಕಾಂಗ್ರೆಸ್ ಅನ್ನು ಬಿಟ್ಟು ಕೊಡಲು ಸಿದ್ಧರಿಲ್ಲ ಎಂದು ಶಿವಸೇನಾ ಬಂಡಾಯ ಶಾಸಕ ಗುಲಾಬ್ ರಾವ್ ಪಾಟೀಲ್ ಗುಹಾಹಟಿಯಲ್ಲಿ ಆರೋಪಿಸಿದ್ದಾರೆ.