Advertisement

Wayanad Landslide ದುರಂತದ ಸ್ಥಳದಲ್ಲೂ ಕಳ್ಳತನ ಮಾನವೀಯತೆಗೆ ಕಳಂಕ

12:45 AM Aug 05, 2024 | Team Udayavani |

ಕೇರಳದ ವಯನಾಡ್‌ನ‌ಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಅಸು ನೀಗಿದವರ ಸಂಖ್ಯೆ ದಿನೇದಿನೆ ಹೆಚ್ಚುತ್ತಲೇ ಸಾಗಿದ್ದು, ಇಲ್ಲಿನ ನದಿಗಳಲ್ಲಿ ಹೆಣಗಳು ಒಂದೊಂದಾಗಿ ತೇಲಿ ಬರುತ್ತಿದ್ದರೆ, ಮಣ್ಣಿನಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಊರಿಗೆ ಊರೇ ಸರ್ವನಾಶವಾಗಿ, ವಾರದ ಹಿಂದೆ ಅದೊಂದು ಜನವಸತಿ ಪ್ರದೇಶವಾಗಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ.

Advertisement

ಮತ್ತೊಂದೆಡೆ ಈ ಘನಘೋರ ದುರಂತಕ್ಕೆ ಸಾಕ್ಷಿಯಾಗಿ ಅಲ್ಲೊಂದು ಇಲ್ಲೊಂದು ಕಟ್ಟಡಗಳು ಅನಾಥವಾಗಿ ಅಳಿದುಳಿದಿವೆ. ಇಂತಹ ಯಾತನಾ ಮಯ ಪರಿಸ್ಥಿತಿಯಲ್ಲಿ ವಿವಿಧ ತಂಡಗಳು ದುರಂತ ಸಂಭವಿಸಿದ ಸ್ಥಳದಲ್ಲಿ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡು, ಅವಿರತವಾಗಿ ಶ್ರಮಿಸುತ್ತಿವೆ. ಒಂದೆಡೆಯಿಂದ ಎಲ್ಲ ಭೇದಭಾವಗಳನ್ನು ಮರೆತು ಸಂತ್ರಸ್ತರನ್ನು ರಕ್ಷಿಸುವ, ಅವರಿಗೆ ನೆರವಿನ ಹಸ್ತ ಚಾಚುವ ಕಾರ್ಯಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಘಟನಾವಳಿಗಳು ಈ ಪ್ರದೇಶದಲ್ಲಿ ನಡೆಯುತ್ತಿರುವುದು ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.

ಭೂಕುಸಿತ ಪೀಡಿತ ಪ್ರದೇಶಗಳಾದ ವಯನಾಡ್‌ ಜಿಲ್ಲೆಯ ಮುಂಡಕೈ ಮತ್ತು ಚೂರಲ್‌ವುಲದಲ್ಲಿ ಕಳೆದೆರಡು ದಿನಗಳಿಂದ ಅಲ್ಲಲ್ಲಿ ಮನೆ ಕಳ್ಳತನ ನಡೆದಿರುವ ಘಟನೆಗಳು ನಡೆದಿರುವ ಬಗೆಗೆ ವರದಿಯಾಗಿವೆ. ಭೂಕುಸಿತದ ಬಳಿಕ ಇಲ್ಲಿನ ಮತ್ತು ಸುತ್ತಮುತ್ತಲಿನ ಊರುಗಳ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದರೆ, ಇನ್ನು ಕೆಲವರು ಮುಂಜಾಗ್ರತ ಕ್ರಮವಾಗಿ ತಮ್ಮ ಮನೆಗಳನ್ನು ತೊರೆದು ಸಮೀಪದ ಪಟ್ಟಣಗಳಲ್ಲಿನ ರೆಸಾರ್ಟ್‌ಗಳ ಕೊಠಡಿಯಲ್ಲಿ ನೆಲೆಯಾಗಿದ್ದಾರೆ. ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಹಾಗೂ ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಗೆ ತೊಡಕಾಗಬಾರದೆಂಬ ಉದ್ದೇಶದಿಂದ ಇನ್ನು ಕೆಲವರು ತಾತ್ಕಾಲಿಕವಾಗಿ ತಮ್ಮ ಮನೆಗಳಿಗೆ ಬೀಗ ಹಾಕಿ ಸುರಕ್ಷಿತ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಪರಿಹಾರ ಮತ್ತು ರಕ್ಷಣೆ ಕಾರ್ಯಾಚರಣೆ ಇನ್ನೂ ಮುಂದುವರಿದಿರುವಂತೆಯೇ ಕೆಲವು ಕಿಡಿಗೇಡಿ ಗುಂಪುಗಳು ತಮ್ಮ ದಂಧೆಗೆ ಶುರುವಿಟ್ಟುಕೊಂಡಿವೆ.

ಸದ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ವಿವಿಧ ಸ್ವಯಂಸೇವಾ ತಂಡಗಳು ಪರಿಹಾರ ಮತ್ತು ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಿವೆ. ವಿವಿಧ ರಾಜ್ಯಗಳಿಂದ ಇಂತಹ ತಂಡಗಳು ಆಗಮಿಸಿ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿವೆ. ಇದನ್ನೇ ತಮ್ಮ ದಾಳವನ್ನಾಗಿಸಿಕೊಂಡಿರುವ ಕಿಡಿಗೇಡಿಗಳು ತಾವೂ ಸ್ವಯಂಸೇವಕರೆಂದು ಹೇಳಿಕೊಂಡು ದುರಂತಪೀಡಿತ ಪ್ರದೇಶಗಳಲ್ಲಿ ಕಳ್ಳತನದ ಕೃತ್ಯಕ್ಕಿಳಿದಿರುವುದು ತೀರಾ ಅಮಾನವೀಯ ಮಾತ್ರವಲ್ಲದೆ ಘೋರ ಅಕ್ಷಮ್ಯ.ಈ ಕುಕೃತ್ಯಗಳ ಸಂಬಂಧ ಸ್ಥಳೀಯ ಸಂತ್ರಸ್ತರಿಂದ ದೂರುಗಳು ಕೇಳಿಬರುತ್ತಿದ್ದಂತೆಯೇ ಸ್ಥಳೀಯಾಡಳಿತ ಮತ್ತು ಪೊಲೀಸ್‌ ಇಲಾಖೆ ದುರಂತ ಪೀಡಿತ ಪ್ರದೇಶಗಳಲ್ಲಿ ಸ್ವಯಂಸೇವಕ ತಂಡಗಳ ನೋಂದಣಿ ಮತ್ತು ಪಾಸ್‌ ನೀಡಿಕೆ ಪ್ರಕ್ರಿಯೆಯನ್ನು ಆರಂಭಿಸಿವೆ. ಅಲ್ಲದೆ ಪೊಲೀಸರು ರಾತ್ರಿ ವೇಳೆ ಗಸ್ತು ಕಾರ್ಯ ನಡೆಸುತ್ತಿದ್ದಾರೆ.

ಆದರೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಈಗ ಸ್ಥಳೀಯರು ಹೊರ ಜಿಲ್ಲೆಗಳಿಂದ ಸಂತ್ರಸ್ತರ ನೆರವಿಗಾಗಿ ಆಗಮಿಸಿರುವ ಸ್ವಯಂಸೇವಾ ತಂಡಗಳ ಬಗೆಗೆ ಅನುಮಾನ ಪಡುವಂತಾಗಿದೆ. ಕಳ್ಳಕಾಕರ ಈ ಹುಂಬತನ ಇಡೀ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮಾನವೀಯತೆ, ಸೇವೆ ಈ ಎಲ್ಲ ಶಬ್ದಗಳಿಗೇ ಕಳಂಕ ಬರುವಂತೆ ಮಾಡಿರುವ ಈ ಸಮಾಜದ್ರೋಹಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಸದೆಬಡಿಯಬೇಕು. ಇಂಥ ಸಮಯಸಾಧಕರು ಇಡೀ ಮನುಕುಲಕ್ಕೆ ಶಾಪವಾಗಿದ್ದು, ಸೂಕ್ತ ಪಾಠ ಕಲಿಸದೇ ಹೋದಲ್ಲಿ ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವಂತಹ ಧೈರ್ಯ ತೋರುವ ಸಾಹಸ, ಸವಾಲಿನ ಕಾರ್ಯಕ್ಕೆ ಮುಂದಾಗುವವರ ಸಂಖ್ಯೆ ಇನ್ನಷ್ಟು ವಿರಳವಾದರೆ ಅದರಲ್ಲಿ ಅಚ್ಚರಿಯೇನಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next