Advertisement
ಇದು ಬಿಜೂರು ಗ್ರಾ.ಪಂ. ವ್ಯಾಪ್ತಿಯ ಕಂಚಿಕಾನ್ ನಾರಂಬಳ್ಳಿ ಬಳಿಯಿಂದ ಸಾಲಿಮಕ್ಕಿ ಕಡೆಗೆ ಸಂಚರಿಸುವ ಮಣ್ಣಿನ ರಸ್ತೆಯ ದುಃಸ್ಥಿತಿಯ ಕಥೆ. ಕಂಚಿಕಾನ್ ಬಳಿಯಿಂದ ಸಾಲಿಮಕ್ಕಿಯವರೆಗೆ 2.5 ಕಿ.ಮೀ. ದೂರವಿದ್ದು, ಈ ಪೈಕಿ ಆರಂಭದ 250 ಮೀ. ಈ ಹಿಂದೆ ಕಾಂಕ್ರೀಟ್ ಆಗಿದ್ದು ಬಿಟ್ಟರೆ ಉಳಿದಂತೆ ಸಂಪೂರ್ಣ ರಸ್ತೆ ಮಣ್ಣಿನ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸುಮಾರು 500 ಮನೆಗಳಿದ್ದು, 250 ಮನೆಗಳಂತೂ ಇದೇ ರಸ್ತೆಯನ್ನು ಅವಲಂಬಿಸಿದೆ.
Related Articles
Advertisement
ನಾರಂಬಳ್ಳಿ, ಕೊಡಿಕೇರಿ, ಕೆಲ್ಸಿಮನೆ, ಸಾಲಿಮಕ್ಕಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಇವರೆಲ್ಲ ಪಡಿತರ ತರಲು ಕಂಚಿಕಾನ್‌ಗೆ ಬರಬೇಕು. ಅಂದರೆ ಈ ಕಂಚಿಕಾನ್ – ಸಾಲಿಮಕ್ಕಿ ಮಾರ್ಗದಲ್ಲಿ 2.5 ಕಿ.ಮೀ. ದೂರವಿದೆ. ಆದರೆ ಹದಗೆಟ್ಟ ರಸ್ತೆಯಿಂದಾಗಿ ಸಾಲಿಮಕ್ಕಿ – ಉಪ್ಪುಂದ – ಕಂಚಿಕಾನ್ ಆಗಿ ಬರೋಬ್ಬರಿ 12-13 ಕಿ.ಮೀ. ದೂರದ ಬರಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.
ಸ್ಪಂದನೆಯೇ ಇಲ್ಲ: ರಸ್ತೆ ಮೇಲೆ ನೀರು ನಿಂತು ಊರಿಗೆ ಯಾವುದೇ ವಾಹನಗಳು ಬರುತ್ತಿಲ್ಲ, ವಯೋವೃದ್ಧ, ಅನಾರೋಗ್ಯ ಪೀಡಿತರು, ಗರ್ಭಿಣಿಯರಿಗೆ ಆಸ್ಪತ್ರೆಗೆ ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ. ಕಂಚಿಕಾನ್ ಶಾಲೆಗೆ ಹೋಗುವ ಅನೇಕ ಮಂದಿ ಮಕ್ಕಳಿದ್ದು, ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡೇ ಹೋಗುವಂತಾಗಿದೆ. ರಿಕ್ಷಾದವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ವಾಹನ ಸಹ ಬಾರದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಈ ರಸ್ತೆಯ ಸಮಸ್ಯೆ ಬಗ್ಗೆ ಅನೇಕ ಬಾರಿ ಗ್ರಾ.ಪಂ., ಜಿ.ಪಂ.ಗೆ ಮನವಿ ಮಾಡಿದರೂ ನಿಮ್ಮ ರಸ್ತೆ ನೋಂದಣಿಯೇ ಆಗಿಲ್ಲ, ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಅನುದಾನ ಇಲ್ಲ ಎನ್ನುವ ಉಡಾಫೆ ಉತ್ತರ ನೀಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಧಾನಿಗೆ ದೂರು
ಈ ರಸ್ತೆ ಅವ್ಯವಸ್ಥೆಯ ಬಗ್ಗೆ ಸ್ಥಳೀಯಾಡಳಿತ ಸ್ಪಂದಿಸದೇ, ನಿರ್ಲಕ್ಷ್ಯ ವಹಿಸಿರುವುದರ ವಿರುದ್ಧ ಬೇಸತ್ತು, ಕಳೆದ ವರ್ಷದ ಆ.21ರಂದು ಇಲ್ಲಿನ ಸ್ಥಳೀಯರಾದ ಸುಬ್ರಹ್ಮಣ್ಯ ಕೊಡಿಕೇರಿ ಅವರು ಪ್ರಧಾನಿ ಕಚೇರಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲಿಂದ ಉಡುಪಿ ಜಿ.ಪಂ.ಗೆ ಪರಿಶೀಲಿಸುವಂತೆ ಸೂಚನೆ ಬಂದಿತ್ತು. ಅವರು ಗ್ರಾ.ಪಂ.ಗೆ ಕೇಳಿದ್ದು, ಪಂಚಾಯತ್‌ನಿಂದ ಈ ರಸ್ತೆ ಇನ್ನೂ ನೋಂದಣಿ ಆಗಿಲ್ಲ ಎನ್ನುವ ಉತ್ತರ ಕಳುಹಿಸಿ, ಜಾರಿಕೊಂಡಿದ್ದಾರೆ. ನಿತ್ಯ ನೂರಾರು ಮಂದಿ ಓಡಾಡುವ ರಸ್ತೆಯ ಬಗ್ಗೆ ಪ್ರಧಾನಿ ಕಚೇರಿವರೆಗೆ ದೂರು ನೀಡಿದರೂ ಸ್ಥಳೀಯಾಡಳಿತ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೆ ಮೀನಾ ಮೇಷ ಎಣಿಸುತ್ತಿರುವುದು ಮಾತ್ರ ಸೋಜಿಗ.
ಮಳೆಯಿಂದಾಗಿ ವಿಳಂಬ: ಉದ್ಯೋಗ ಖಾತರಿ ಯೋಜನೆಯಲ್ಲಿ 50 ಲಕ್ಷ ರೂ. ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. 4 ಲಕ್ಷ ರೂ. ಅನುದಾನದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಕಾಂಕ್ರೀಟ್ ರಸ್ತೆ ಹಾಗೂ ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಮಳೆಯಾಗಿದ್ದರಿಂದ ಕಾಮಗಾರಿ ಆರಂಭ ವಿಳಂಬಗೊಂಡಿದೆ. – ರಮೇಶ್ ವಿ. ದೇವಾಡಿಗ, ಬಿಜೂರು ಗ್ರಾ.ಪಂ.ಅಧ್ಯಕ್ಷರು
ಯಾರದೂ ವಿರೋಧವಿಲ್ಲ: ಇದು 40 ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ರಸ್ತೆಯಾಗಿದ್ದು, ತುಂಬಾ ಹಿಂದೆಯೇ ಪಂ. ರಸ್ತೆಯನ್ನಾಗಿ ಮಾಡಿ ಎಂದು ಗ್ರಾಮಸ್ಥರು ಮನವಿ ಕೊಟ್ಟಿದ್ದರು. ದಾನ ಪತ್ರಗಳನ್ನು ಸಹ ನೀಡಿರುವ ಮಾಹಿತಿ ಇದೆ. ಆದರೆ ಆ ದಾಖಲೆ ಈಗ ಪಂ. ಬಳಿ ಇಲ್ಲ. ಆದರೆ ಈಗಲೂ ಆಸುಪಾಸಿನ ಜಾಗದವರು ಯಾರದೂ ವಿರೋಧವಿಲ್ಲ. ಎಲ್ಲರಿಗೂ ಈ ರಸ್ತೆ ಅಗತ್ಯವಿರುವುದರಿಂದ ಆದಷ್ಟು ಶೀಘ್ರ ಅಭಿವೃದ್ಧಿಪಡಿಸಲಿ. ಈಗ ತುರ್ತಾಗಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಲಿ. – ನರಸಿಂಹ ದೇವಾಡಿಗ, ಸ್ಥಳೀಯರು
– ಪ್ರಶಾಂತ್ ಪಾದೆ