Advertisement

ದಶಕ ಕಳೆದರೂ ಬಗೆಹರಿಯದ ಭೂ ದರ ಸಮಸ್ಯೆ

06:15 PM Nov 17, 2022 | Team Udayavani |

ಸೇಡಂ: ತಾಲೂಕಿನ ಮಳಖೇಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಟ್ರಾಟೆಕ್‌ ಸಿಮೆಂಟ್‌ ಕಾರ್ಖಾನೆ ಇಲ್ಲಿನ ಸುತ್ತಮುತ್ತಲಿನ ಗ್ರಾಮದ ರೈತರ ಫಲವತ್ತಾದ ಜಮೀನನ್ನು ಕಡಿಮೆ ದರಕ್ಕೆ ಖರೀದಿಸಿದೆಯಲ್ಲದೇ ಜಮೀನು ಕಳೆದುಕೊಂಡ ರೈತರ ಕುಟುಂಬಕ್ಕೆ ಉದ್ಯೋಗ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಾರ್ಖಾನೆಯವರಿಂದ ರೈತರಿಗೆಅನ್ಯಾಯವಾಗುತ್ತಿದ್ದು, ಸರಕಾರ ಇದನ್ನು ಸರಿಪಡಿಸಬೇಕು ಎಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಗಿದೆ.

Advertisement

ತಾಲೂಕಿನಲ್ಲಿ ಹತ್ತಾರು ಕಾರ್ಖಾನೆಗಳು ತಲೆ ಎತ್ತಿವೆ. ಇನ್ನು ಕೆಲ ಕಾರ್ಖಾನೆಗಳು ಆರಂಭಿಕ ಹಂತದಲ್ಲಿವೆ. ಆದರೆ ಸ್ಥಳೀಯ ರೈತರಿಗೆ ಕೆಲ ಭರವಸೆ ನೀಡಿ ದಲ್ಲಾಳಿಗಳ ಮೂಲಕ ಜಮೀನನ್ನು ಮನಸೋ ಇಚ್ಛೆ ಅಗ್ಗದ ದರಕ್ಕೆ ಖರೀದಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. 2011-12 ರಲ್ಲಿ ರಾಜಶ್ರೀ ಸಿಮೆಂಟ್‌ ಕಾರ್ಖಾನೆ ತಾಲೂಕಿನ ಊಡಗಿ, ಹಂಗನಹಳ್ಳಿ ಮತ್ತು ನೃಪತುಂಗ ನಗರದ ರೈತರ ಜಮೀನಿಗೆ ಪ್ರತಿ ಎಕರೆಗೆ 3.50 ಲಕ್ಷ ರೂ. ನೀಡಿ ಖರೀದಿ ಮಾಡಿದೆ. ಆದರೆ ಹಂಗನಳ್ಳಿ ಗ್ರಾಮದಲ್ಲಿನ ಸರ್ಕಾರಿ ಗೈರಾಣಾ ಭೂಮಿಯಲ್ಲಿನ 24 ಎಕರೆ ಜಮೀನನ್ನು ಪ್ರತಿ ಎಕರೆಗೆ 8 ಲಕ್ಷ ರೂ. ನೀಡಿ ಖರೀದಿ ಮಾಡಿದೆ. ರೈತರ ಜಮೀನಿಗೆ ಒಂದು ಬೆಲೆ. ಸರ್ಕಾರಿ ಗೈರಾಣಾ ಭೂಮಿಗೆ ಮತ್ತೂಂದು ಬೆಲೆ ಈ ತಾರತಮ್ಯ ಸರಿಯಲ್ಲ ಎಂಬುದು ರೈತರ ವಾದ.

ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ದಾಲ್ಮಿಯಾ ಕಾರ್ಖಾನೆ ಈಗಾಗಲೇ ರೈತರ ಜಮೀನು ಖರೀದಿ ಮಾಡಿದ್ದು, ಪ್ರತಿ ಎಕರೆಗೆ 7.75 ಲಕ್ಷ ನೀಡಿದೆ. ಆದರೆ ಅಲ್ಟ್ರಾಟೆಕ್‌ ಕಾರ್ಖಾನೆ ರೈತರಿಗೆ ಸುಳ್ಳು ಭರವಸೆ ನೀಡಿ ಜಮೀನು ಖರೀದಿ ಮಾಡಿದೆ. ಇದನ್ನು ಖಂಡಿಸಿ ರೈತರು ಮಾಜಿ ಕಾರ್ಮಿಕ ಸಚಿವ ಎಸ್‌.ಕೆ.ಕಾಂತಾ ಅವರ ನೇತೃತ್ವದಲ್ಲಿ ವರ್ಷಗಳ ಕಾಲ ಸೇಡಂನ ಸಹಾಯಕ ಆಯುಕ್ತರ ಕಾರ್ಯಾಲಯದ ಮುಂದೆ ಧರಣಿ ನಡೆಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಸರೋಜಿನಿ ಮಹಿಷಿ ವರದಿ ಪ್ರಕಾರ ತಾಲೂಕಿನ ಯಾವ ಕಾರ್ಖಾನೆಯಲ್ಲಿಯೂ ಜಮೀನು ಕೊಟ್ಟವರಿಗೆ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಸಹ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುದು ರೈತರ ಆರೋಪವಾಗಿದ್ದು, ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಕೃಷಿ ಜಮೀನುಗಳನ್ನು ಯಾವುದಾದರೂ ಕಾರ್ಖಾನೆಗಳಿಗೆ ನೀಡುವಾಗ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಲಿಖೀತ ರೂಪದಲ್ಲಿ ದಾಖಲಿಸಬೇಕು. ಆದರೆ 2011-12 ರಲ್ಲಿ ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೇ ಅಲ್ಟ್ರಾಟೆಕ್‌ ಕಾರ್ಖಾನೆಗೆ ಜಮೀನು ಖರೀದಿಸಲು ಅನುಮತಿ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ದಾಖಲಿಸದೆ ಇರುವುದು ಭೂ ಅಧಿನಿಯಮದ ಉಲ್ಲಂಘನೆಯಾಗಿದೆ. ರೈತರಿಗೆ ನ್ಯಾಯ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಸೇಡಂಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗದೆ.
ಎಸ್‌.ಕೆ ಕಾಂತಾ, ಮಾಜಿ ಕಾರ್ಮಿಕ ಸಚಿವರು

ರೈತರಿಗೆ ನ್ಯಾಯ ಒದಗಿಸುವಂತೆ ಮಾಜಿ ಸಚಿವ ಎಸ್‌.ಕೆ. ಕಾಂತಾ ಅವರೊಂದಿಗೆ 2015ರಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಶ್ರೀನಿವಾಸ್‌ ಪ್ರಸಾದರನ್ನು ಭೇಟಿ ಮಾಡಿ ಸಭೆ ಮಾಡಲಾಗಿತ್ತು. ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಬೆಲೆ ಸಿಕ್ಕಿಲ್ಲ. ಆದ್ದರಿಂದ ಸೇಡಂ ಪಟ್ಟಣದ ಸಹಾಯಕ ಆಯುಕ್ತರ ಕಾರ್ಯಾಲಯದ ಮುಂಬಾಗದಲ್ಲಿ 1712 ದಿನ ಧರಣಿ ನಡೆಸಲಾಯಿತು. ಕೊರೊನಾ ಕಾರಣಕ್ಕಾಗಿ ಧರಣಿ ಹಿಂಪಡೆಯಲಾಗಿತ್ತು. ಈ ಮಧ್ಯೆ ಜಮೀನು ಕಳೆದುಕೊಂಡ 22 ರೈತರು ಮೃತಪಟ್ಟಿದ್ದಾರೆ. ಉಳಿದಿರುವ ರೈತರಿಗೆ, ಮೃತ ರೈತರ ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಬೇಕಿದೆ.
ಉಮೇಶ ಚವ್ಹಾಣ, ಗ್ರಾಪಂ ಸದಸ್ಯ ನೃಪತುಂಗ ನಗರ

Advertisement

*ಸುಧೀರ ಎಸ್‌.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next