ಉಡುಪಿ: ಸರಕಾರದ ಸಾಮಾಜಿಕ ಕಲ್ಯಾಣ ಯೋಜನೆಗೆ ಸ್ವಾಗತವಿದೆ. ಹೊಸ ಸರಕಾರ ಬಂದು 4 ತಿಂಗಳಾದರೂ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಯಾರಿಗೆ ಅಗತ್ಯವಿದೆಯೋ ಅವರಿಗೆ ಕೊಡಬೇಕಾದದ್ದನ್ನು ಕಡಿತ ಮಾಡಿ ಇನ್ನೊಬ್ಬರಿಗೆ ನೀಡುವುದಕ್ಕೆ ವಿರೋಧವಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳವಾರ ಪತ್ರಿಕಾ ಭವನದ ಸಂವಾದ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ರಾಜ್ಯ ಸರಕಾರದ ಬಜೆಟ್ 3 ಲಕ್ಷ ಕೋಟಿ ರೂ. ಇದರಲ್ಲಿ 1.5 ಲಕ್ಷ ಕೋಟಿ ರೂ. ಸಿಬಂದಿ ವೇತನ, ಅಡಳಿತಾತ್ಮಕ ವೆಚ್ಚಕ್ಕೆ ಖರ್ಚಾಗುತ್ತದೆ. ಉಳಿದ 1.5 ಲಕ್ಷ ಕೋಟಿ ರೂ. 34 ಖಾತೆಗಳಿಗೆ ಹಂಚಿಕೆಯಾಗುತ್ತದೆ. ಗ್ಯಾರಂಟಿ ಯೋಜನೆಗೆ 60ರಿಂದ 70 ಸಾವಿರ ಕೋ.ರೂ. ಬೇಕಾಗಿದೆ. ಈ ಕಾರಣದಿಂದಲೇ ಶಾಸಕರಿಗೆ ಅನುದಾನ ಬರುತ್ತಿಲ್ಲ ಎಂದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ
ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾ ಗಿದ್ದು, ಟಿಕೆಟ್ ಸಿಗದಿದ್ದರೂ ಪಕ್ಷದ ಅಭ್ಯರ್ಥಿ ಪರ ಇರುತ್ತೇನೆ. ಕೊನೆ ಘಳಿಗೆಯಲ್ಲಿ ಸಮಸ್ಯೆಯಾಗಬಾರದು ಎಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದರು.