Advertisement

ಶಿವಮೊಗ್ಗ: ಪರೀಕ್ಷೆ ಮುಗಿದ ಕೆಲವೇ ಗಂಟೆಯಲ್ಲಿ ಫಲಿತಾಂಶ ಕೊಡುತ್ತಿದ್ದ ಕುವೆಂಪು ವಿವಿ ಸಹಿತ ಅನೇಕ ವಿಶ್ವವಿದ್ಯಾನಿಲಯಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ – ನಿಯಮಗಳು ತೊಡಕಾಗಿವೆ. ಪರೀಕ್ಷೆ ಮುಗಿದು ತಿಂಗಳು ಕಳೆದರೂ ಮೌಲ್ಯಮಾಪನ ಆರಂಭವಾಗಿಲ್ಲ.

Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡ ಬಳಿಕ ಉಂಟಾದ ಗೊಂದಲಗಳಿಗೆ ಇನ್ನೂ ತೆರೆ ಬಿದ್ದಿಲ್ಲ. ಪಠ್ಯಪುಸ್ತಕ, ಹೊಸ ವಿಷಯಗಳ ಬೋಧನೆ, ಪ್ರಾಕ್ಟಿಕಲ್‌ ಅಂಕ, ಥಿಯರಿ, ಪರೀûಾ ಶುಲ್ಕ, ಪರೀಕ್ಷೆ ಪ್ರವೇಶ ಪತ್ರ ಸಹಿತ ನೂರಾರು ಸಮಸ್ಯೆಗಳ ಜತೆ ಈಗ ಫಲಿತಾಂಶ ಸಮಸ್ಯೆ ಕೂಡ ಸೇರಿಕೊಂಡಿದೆ. ಕೆಲ ವಿವಿಗಳಲ್ಲಿ ತಿಂಗಳು ಕಳೆದರೂ ಮೌಲ್ಯಮಾಪನ ಆರಂಭವಾಗಿಲ್ಲ. ಎನ್‌ಇಪಿ ಬಗ್ಗೆ ಪೂರ್ಣ ಮಾಹಿತಿ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಎನ್‌ಇಪಿ ಜಾರಿ ನಂತರ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಪ್ರೋಟೋಕಾಲ್‌ ಮೀರಿ ಕೆಲಸ ಮಾಡಲೂ ಆಗುತ್ತಿಲ್ಲ. ಹಾಗಾಗಿ ಪರೀಕ್ಷೆ ಹಾಗೂ ಫಲಿತಾಂಶದಲ್ಲಿ ತಡೆಯಾಗಿದೆ. ಎಲ್ಲ ಪರೀಕ್ಷೆ ಮುಗಿಯುವವರೆಗೂ ಮೌಲ್ಯಮಾಪನಕ್ಕೆ ಅನುಮತಿ ಸಿಗದಿರುವುದು ವಿವಿಗಳ ಮೇಳೆ ಒತ್ತಡಕ್ಕೆ ಕಾರಣವಾಗಿದೆ.

ಗೊಂದಲ ಏನು?:
ಮೊದಲು ಪರೀಕ್ಷೆ ಮುಗಿದ ನಂತರವೇ ಕೋಡಿಂಗ್‌ ಮಾಡಿ ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತಿತ್ತು. ಪೂರ್ಣ ಪ್ರಮಾಣದ ಪರೀಕ್ಷೆ ಮುಗಿಯುವಷ್ಟರಲ್ಲಿ ಕಡಿಮೆ ವಿದ್ಯಾರ್ಥಿಗಳುಳ್ಳ ವಿಷಯದ ಫಲಿತಾಂಶ ಲಭ್ಯವಾಗುತ್ತಿತ್ತು. ಹೊಸ ನಿಯಮದಲ್ಲಿ ಇದನ್ನು ಊಹಿಸುವುದು ಅಸಾಧ್ಯ. ಹೊಸ ನೀತಿ ಪ್ರಕಾರ ಪರೀಕ್ಷೆಯ ಎಲ್ಲ ವಿಷಯಗಳು ಪೂರ್ಣಗೊಂಡ ಬಳಿಕ ಯುಯುಸಿಎಂ (ಯೂನಿವರ್ಸಿಟಿ ಯೂನಿಫೈಡ್‌ ಕಂಪ್ಯೂಟರ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌) ಸಾಫ್ಟ್‌ವೇರ್‌ನಲ್ಲಿ ಕೋಡಿಂಗ್‌ ಸೃಷ್ಟಿಸಲು (ಪಿಆರ್‌ಎನ್‌ ನಂಬರ್‌) ಅವಕಾಶ ಸಿಗುತ್ತದೆ. ಅನಂತರ ಅದನ್ನು ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತದೆ.

ಮೂರು ದಿನಗಳ ಹಿಂದೆ ಕೋಡಿಂಗ್‌ ಸೃಷ್ಟಿಸಲು ಅವಕಾಶ ನೀಡಲಾಗಿದ್ದು, ಎಲ್ಲ ಉತ್ತರ ಪತ್ರಿಕೆಗಳಿಗೆ ಕೋಡಿಂಗ್‌ ಅಂಟಿಸಿ ಮೌಲ್ಯಮಾಪನಕ್ಕೆ ಕಳುಹಿಸಲು 15ರಿಂದ 20 ದಿನ ಬೇಕು. ಫಲಿತಾಂಶ ನೀಡಲು ಕನಿಷ್ಠ ಒಂದೂವರೆ ತಿಂಗಳು ಬೇಕು. ಜತೆಗೆ ಈ ಬಾರಿ ಮೌಲ್ಯಮಾಪನ ಅಂಕಗಳನ್ನು ಶಿಕ್ಷಕರೇ ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಬೇಕಿದೆ. ಒಬ್ಬ ಶಿಕ್ಷಕ 36 ಪತ್ರಿಕೆ ಮೌಲ್ಯಮಾಪನ ಮಾಡಬೇಕಿತ್ತು.ಈಗ ಅದರ ಸಂಖ್ಯೆ ಈಗ 40ಕ್ಕೆ ಏರಿದೆ. ಜತೆಗೆ ಅಪ್‌ಲೋಡ್‌ ಜವಾಬ್ದಾರಿಯೂ ಉಪನ್ಯಾಸಕರ ಹೆಗಲಿಗೇರಿದೆ.

ತೊಡಕುಗಳೇನು?
ಈಗಾಗಲೇ ಎರಡನೇ ಸೆಮಿಸ್ಟರ್‌ ಆರಂಭಗೊಂಡಿದ್ದು, ಮೌಲ್ಯಮಾಪನಕ್ಕೆ ಹೋದರೆ ವಿದ್ಯಾರ್ಥಿಗಳ ಪಾಠ-ಪ್ರವಚನಕ್ಕೆ ತಡೆಯಾಗಲಿದೆ. ನೂರಕ್ಕೂ ಹೆಚ್ಚು ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗವಹಿಸಿದರೆ ಅಂಕ ಅಪ್‌ಲೋಡ್‌ ಮಾಡಲು ಎಲ್ಲರಿಗೂ ಕಂಪ್ಯೂಟರ್‌ ವ್ಯವಸ್ಥೆ ಸಿಗುವುದೇ ಎಂಬ ಪ್ರಶ್ನೆಯನ್ನು ಹಲವು ಮೌಲ್ಯಮಾಪಕರು ಮುಂದಿಟ್ಟಿದ್ದಾರೆ.

Advertisement

ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
ಕುವೆಂಪು ವಿವಿ ಒಂದರಲ್ಲೇ 19 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮೊದಲನೇ ಸೆಮಿಸ್ಟರ್‌ ಪರೀಕ್ಷೆ ಬರೆದಿದ್ದಾರೆ. ಮೈಸೂರು, ಮಂಗಳೂರು, ಬೆಂಗಳೂರು, ಧಾರವಾಡ, ರಾಯಚೂರು ಮುಂತಾದ ಎಲ್ಲ ವಿವಿಗಳು ಸೇರಿದರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಎನ್‌ಇಪಿ ಅಡಿಯಲ್ಲಿ ಇದೇ ಮೊದಲು ಮೌಲ್ಯ ಮಾಪನ ಮಾಡು ತ್ತಿರುವುದರಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಎಲ್ಲವೂ ಲೈನ್‌ ಆಗಿದ್ದು, ಕೋಡಿಂಗ್‌- ಡಿ ಕೋಡಿಂಗ್‌ ವಿಳಂಬ ವಾಗುತ್ತಿದೆ.
– ಪ್ರೊ| ಲಿಂಗರಾಜ ಗಾಂಧಿ, ಕುಲಪತಿ, ಬೆಂ.ನಗರ ವಿವಿ

ಎನ್‌ಇಪಿ ಮೊದಲನೇ ಸೆಮಿಸ್ಟರ್‌ ಪರೀಕ್ಷೆ ಪೂರ್ಣಗೊಂಡಿದ್ದು, ಇಲಾಖೆಯಿಂದ ಕೋಡಿಂಗ್‌ ಮಾಡಲು ಅನುಮತಿ ಸಿಕ್ಕಿದೆ. ಮೊದಲೆಲ್ಲ ಪರೀಕ್ಷೆ ಮುಗಿದ ಮರು ದಿನವೇ ಮೌಲ್ಯಮಾಪನಕ್ಕೆ ಸಿದ್ಧತೆ ಮಾಡಲಾಗುತ್ತಿತ್ತು. ಕೋಡಿಂಗ್‌ ಬಳಿಕ ಮೌಲ್ಯಮಾಪನ ನಡೆಸಲಾಗುವುದು. ಹೊಸ ಅನುಭವ, ಹೊಂದಾಣಿಕೆಗೆ ಸಮಯ ಹಿಡಿಯಲಿದೆ.
– ಡಾ| ಮಂಜುನಾಥ್‌ ಕೆ.ಆರ್‌.,
ಡೆಪ್ಯುಟಿ ರಿಜಿಸ್ಟ್ರಾರ್‌, ಕುವೆಂಪು ವಿವಿ

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.