ವಿಜಯಪುರ : ಮಂಡ್ಯದಲ್ಲಿ ಉರಿಗೌಡ-ನಂಜೇಗೌಡ ಮಹಾದ್ವಾರ ತೆರವು ಮಾಡಿದ್ದು, ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಸಮಾಧಾನ ಹೊರ ಹಾಕಿದ್ದಾರೆ.
ಸೋಮವಾರ ಜಿಲ್ಲೆಯ ಆಲಮಟ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮಂಡ್ಯ ಭೇಟಿ ವೇಳೆ ಉರಿಗೌಡ- ನಂಜೇಗೌಡ ದ್ವಾರ ಹಾಕಿದ್ದು ಸರಿಯಾಗಿದೆ, ಆದರೆ ತೆರವು ಮಾಡಿದ್ದು ಯಾಕೆ ಗೊತ್ತಿಲ್ಲ. ಬರುವ ದಿನಗಳಲ್ಲಿ ಉರಿಗೌಡ- ನಂಜೇಗೌಡ ಹೆಸರಿನಲ್ಲಿ ಶಾಶ್ವತ ದ್ವಾರ ನಿರ್ಮಿಸುವ ಭರವಸೆ ನೀಡಿದರು.
ದೇಶದ ರಾಜಕೀಯದಲ್ಲಿ ಈ ವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳುತ್ತಾರೆ ಅದು ಉಲ್ಟಾ ಆಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಸಿದ್ಧರಾಮಯ್ಯ ಈ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಿಲ್ಲ ಎಂದಿದ್ದರು, ಮೋದಿ ಪ್ರಧಾನಿಯಾದರು. ಯಡಿಯೂರಪ್ಪ ಸಿಎಂ ಆಗುವಿದಲ್ಲ ಎಂದಿದ್ದರು, ಅದು ಉಲ್ಟಾ ಆಯ್ತು. ಹೀಗಾಗಿ ಸಿದ್ದರಾಮಯ್ಯ ನಿತ್ಯವೂ ತಮ್ಮ ಭಾಷಣದಲ್ಲಿ ಭವಿಷ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಬೆಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ಧರಾಮಯ್ಯ ಪ್ರಚಾರ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವ್ಯಂಗ್ಯವಾಡಿದರು.
Related Articles
ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ, ಇದೀಗ ಸದರಿ ಯೋಜನೆಯ ಶ್ರೇಯಸ್ಸು ತಮ್ಮದೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ದೇಶದಾದ್ಯಂತ ವಾರಂಟಿ ಅವಧಿ ಮುಗಿದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಚುನಾವಣೆ ಪೂರ್ವದಲ್ಲಿ ವಾರಂಟಿ ಕಾರ್ಡ್ ಹಂಚಲು ಮುಂದಾಗಿದೆ. ಇದರಿಂದ ಜನರಿಗೆ ಏನೂ ಪ್ರಯೋಜನವಿಲ್ಲ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಎನ್ನುವುದೇ ಫಾಲ್ಸ್ ಕಾರ್ಡ್. ಆದರೆ ಬಿಜೆಪಿ ಪಕ್ಷ ಜನರಿಗೆ ಫಾಲ್ಸ್ ಕಾರ್ಡ್ ನೀಡದೇ ಅಭಿವೃದ್ಧಿ ಮೂಲಕ ಕಾರ್ಡ್ ನೀಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ನದಿಗಳಿಂದ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ತಿರಸ್ಕರಿಸಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಕರೆ ತುಂಬುವ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಕಾಂಗ್ರೆಸ್ ಪಕ್ಷದ ಎಂ.ಬಿ.ಪಾಟೀಲ ನಮ್ಮ ಸಾಧನೆಯನ್ನು ಹೈಜಾಕ್ ಮಾಡಿದ್ದಾರೆ ಎಂದರು.
ಡಿಕೆಶಿ ಬ್ಲಾಕ್‍ಮೇಲ್ ಗೊತ್ತಿಲ್ಲ
ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವವರಿಗೆ ಕಾಂಗ್ರೆಸ್ ಗೆ ವಾಪಾಸ್ ಬರದಿದ್ದರೆ ಸಿಡಿ ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ರಮೇಶ ಜಾರಕಿಹೊಳಿ ಮಾಡಿರುವ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ರಮೇಶ ಜಾರಕಿಹೊಳಿಗೆ ಈ ಬಗ್ಗೆ ಮಾಹಿತಿ ಇರಬೇಕು, ಶಿವಕುಮಾರ-ರಮೇಶ ಜಾರಕಿಹೊಳಿ ಈ ಹಿಂದೆ ಒಂದೇ ಪಕ್ಷದಲ್ಲಿ ಕೆಲಸ ಮಾಡಿದವರು. ಹೀಗಾಗಿ ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತೆ ಎನ್ನುವ ಇನ್ಪಾರ್ಮೆಶನ್ ಜಾರಕಿಹೊಳಿಗೆ ಇರಬಹುದು. ಕಾಂಗ್ರೆಸ್ ಸಂಸ್ಕೃತಿ ಗೊತ್ತಿರುವ ಕಾರಣಕ್ಕೆ ಈ ವಿಚಾರ ರಮೇಶ ಜಾರಕಿಹೊಳಿ ಬಹಿರಂಗ ಮಾಡಿದ್ದಾರೆ ಎನಿಸುತ್ತದೆ ಎಂದರು.
ಬಿಜೆಪಿ ಡಿಎನ್‍ಎ, ಕುಟುಂಬ ಆಧಾರಿತ ನಾಯಕತ್ವವಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಡಿಎನ್‍ಎ ಆಧಾರಿತ ನಾಯಕತ್ವ ಲಭ್ಯವಾದರೆ, ಜೆಡಿಎಸ್ ಪಕ್ಷದಲ್ಲಿ ಕುಟುಂಬದ ಆಧಾರಿತ ನಾಯಕತ್ವ ಇದೆ. ಆದರೆ ಬಿಜೆಪಿ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತ ನಾಯಕತ್ವ ವಹಿಸುವ ಶಕ್ತಿ ಹೊಂದಿದ್ದಾರೆ. ಕುಟುಂಬ ರಾಜಕಾರಣ ನಡೆಯಲ್ಲ. ಬಿಜೆಪಿ ಪಕ್ಷದ ಟಿಕೆಟ್‍ಗಳು ಮೇಡ್ ಇನ್ ಕಿಚನ್ ಆಗಲ್ಲ, ಪಕ್ಷದ ವರಿಷ್ಠರು ಅರ್ಹರನ್ನು ಗುರುತಿಸಿ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.