Advertisement

ಕುಂಟುತ್ತಾ ಸಾಗಿದೆ ಎತ್ತಿನ ಹೊಳೆ ಯೋಜನೆ

06:38 AM Jun 11, 2019 | Lakshmi GovindaRaj |

ಸಕಲೇಶಪುರ: ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಲು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನಪ್ರತಿನಿಧಿಗಳ ನಿಯೋಗ ಜೂ. 12ರಂದು ತಾಲೂಕಿಗೆ ಆಗಮಿಸುತ್ತಿದ್ದು ಅಲ್ಲಿನ ಜನಪ್ರತಿನಿಧಿಗಳು ನೀರಿನ ನಿರೀಕ್ಷೆಯಲ್ಲಿರುವ ಬರಪೀಡಿತ ಪ್ರದೇಶಗಳ ಜನರಿಗೆ ಮಂಕುಬೂದಿ ಎಸಗುವ ಯತ್ನ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ.

Advertisement

ಕಾಮಗಾರಿ ವಿಳಂಬ: ಬರಪೀಡಿತ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಜನತೆಯ ದಾಹವನ್ನು ತೀರಿಸುವ ನಿಟ್ಟಿನಲ್ಲಿ ಎತ್ತಿನಹೊಳೆ ಯೋಜನೆಯನ್ನು ತಾಲೂಕಿನಲ್ಲಿ ಸುಮಾರು 4 ವರ್ಷಗಳ ಹಿಂದೆ ಆರಂಭಿಸಲಾಗಿದ್ದು ಆದರೆ ಯೋಜನೆಯ ಫ‌ಲದ ಬಗ್ಗೆ ಯಾವುದೆ ಖಚಿತತೆ ಇಲ್ಲ. ಸುಮಾರು 13ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ಬರಪೀಡಿತ ಪ್ರದೇಶಗಳಿಗೆ ನೀರು ಹರಿಯುತ್ತದೆಯೋ ಬಿಡುತ್ತೋ ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೇಬು ಅಂತು ತುಂಬುತ್ತಾ ಇದೆ ಎಂಬ ಆರೋಪವಿದೆ.

ಹುಸಿಯಾದ ಭರವಸೆ: ಕಳೆದ ವರ್ಷ ಬರಪೀಡಿತ ಪ್ರದೇಶಗಳ ಜನಪ್ರತಿನಿಧಿಗಳ ಜೊತೆಗೆ ಆಗಮಿಸಿದ್ದ ಅಲ್ಲಿನ ಜನಪ್ರತಿನಿಧಿಗಳ ಹಿಂಬಾಲಕರು ಕಾಮಗಾರಿಯನ್ನು ವೀಕ್ಷಿಸಿ ಇನ್ನೇನು ನೀರು ಸಿಕ್ಕೇ ಬಿಡುತ್ತದೆಂದು ಖುಷಿಯಾಗಿ ಎತ್ತಿನಹೊಳೆ ನೀರನ್ನು ಕುಡಿದು ಮೈಮೇಲೆ ಎರಚಿಕೊಂಡು ಸಂತೋಷ ಪಟ್ಟಿದ್ದರು. ಆದರೆ ಇದಾಗಿ ಸರಿ ಸುಮಾರು ಒಂದು ವರ್ಷಗಳಾಗುತ್ತ ಬಂದಿದ್ದು, ಈ ಯೋಜನೆಯಿಂದ ಮಲೆನಾಡಿನ ಪರಿಸರದ ಮೇಲೆ ನೇರ ಹಾನಿಯುಂಟಾಗಿದ್ದು , ಜೊತೆಗೆ ಪಕ್ಕದ ದಕ್ಷಿಣ ಕನ್ನಡದ ಮೇಲೂ ಪರಿಣಾಮ ಬೀರಿದೆ.

ಪರಿಸರ ನಾಶ: ಯೋಜನಗಾಗಿ ಭಾರೀ ಗಾತ್ರದ ಪೈಪ್‌ಗ್ಳನ್ನು ಭೂಮಿಯನ್ನು ಬಗೆದು ಹೂಳಲಾಗಿದೆ. ಸುಮಾರು 4 ಕಡೆ ಮಣ್ಣನ್ನು ತೆಗೆದು ನೀರು ಸಂಗ್ರಹ ಕೇಂದ್ರಗಳನ್ನು ಮಾಡಲಾಗಿದೆ. ಅನೇಕ ಕಡೆ ಯೋಜನೆಗಾಗಿ ಭಾರಿ ಗಾತ್ರ ಹಿಟಾಚಿ ಯಂತ್ರಗಳನ್ನು ಬಳಸಿದ ಪರಿಣಾಮ ಭೂ ಕುಸಿತಗಳು ಉಂಟಾಗಿದೆ. ಎತ್ತಿನಹೊಳೆ ಯೋಜನಾ ವ್ಯಾಪ್ತಿಯ ಹಲವು ನದಿ, ಹಳ್ಳಗಳ ದಂಡೆಗಳು ಈ ವರ್ಷ ಸಂಪೂರ್ಣವಾಗಿ ಬತ್ತಿ ಹೋಗಿದೆ.

ಮಲೆನಾಡಿನಲ್ಲಿ ಎಂದಿಗೂ ಈ ರೀತಿಯ ಪರಿಸ್ಥಿತಿ ಉಂಟಾಗಿರಲಿಲ್ಲ. ಕುಡಿಯುವ ನೀರಿಗಾಗಿ ತೊಂದರೆ ಮಾಡಬಾರದೆಂದು ಉದಾರಿಯಾಗಿದ್ದ ಇಲ್ಲಿನ ಜನ ಇದೀಗ ಯೋಜನೆಯ ಪರಿಣಾಮ ಅನುಭವಿಸುತ್ತಿದ್ದಾರೆ. ಸಕಲೇಶಪುರ ತಾಲೂಕಿನಲ್ಲಿ ಇನ್ನು ಹಲವರು ರೈತರಿಗೆ ಯೋಜನೆಗಾಗಿ ಕಳೆದುಕೊಂಡಿರುವ ಜಮೀನುಗಳಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಹಲವು ರೈತರು ಯೋಜನೆಗೆ ಭೂಮಿ ಕೊಡುವುದಿಲ್ಲವೆಂದು ನ್ಯಾಯಾಲಕ್ಕೆ ಹೋಗಿದ್ದಾರೆ. ಇದರಿಂದ ಇಂತಹ ಕಡೆಗಳಲ್ಲಿ ಕಾಮಗಾರಿಯನ್ನು ಮಾಡುತ್ತಿಲ್ಲ.

Advertisement

ಕಳಪೆ ಕಾಮಗಾರಿ: ಮಲೆನಾಡಿನ ಜನರ ಜೊತೆಗೆ ಆಲೂರು, ಬೇಲೂರು, ಅರಸೀಕೆರೆ ತಾಲೂಕುಗಳ ರೈತರು ಸಹ ಭೂಮಿಯನ್ನು ಕಳೆದುಕೊಂಡಿದ್ದು, ಇನ್ನು ಯಾರಿಗೂ ಸಹ ಸರಿಯಾದ ಪರಿಹಾರ ಸಿಕ್ಕಿಲ್ಲ. ಹಲವೆಡೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬ ಆರೋಪವಿದೆ.

ವಿಜ್ಞಾನಿಗಳ ಅನುಮಾನ: ಸೆಂಟ್ರಲ್‌ ವಾಟರ್‌ ಕಮಿಷನ್‌ 2012ನೇ ಇಸವಿಯಲ್ಲಿ, ಜಲಮೂಲಗಳ ಲಭ್ಯತೆ ಕುರಿತು ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ನ್ಯಾಷನಲ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಹೈಡ್ರಾಲಜಿ ಸಹ 2014ರಲ್ಲಿ ಎತ್ತಿನಹೊಳೆ ಯೋಜನೆ ಯಶಸ್ಸಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದು ಆದರೆ ಅಲ್ಲಿನ ಶಿಫಾರಸುಗಳನ್ನು ರಾಜಕಾರಣಿಗಳು ಕಸದ ಬುಟ್ಟಿಗೆ ಎಸೆದಿದ್ದಾರೆ.

ವಿಜ್ಞಾನಿಗಳಿಂದ ಯಾವುದೆ ರೀತಿಯ ಸಂಶೋಧನೆಗಳನ್ನು ಇಲ್ಲಿ ಮಾಡಿಸಿಲ್ಲ ಹಾಗೂ ಈ ಕುರಿತು ಯಾವುದೆ ವರದಿಗಳನ್ನು ಜನತೆಗೆ ನೀಡಿಲ್ಲ.ಯೋಜನೆಗಾಗಿ ಹೋರಾಟ ಮೊದಲು ಆರಂಭವಾಗಿದ್ದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆದರೆ ಇದೀಗ ಇದರ ಜೊತೆಗೆ ಇನ್ನು 5 ಜಿಲ್ಲೆಗಳನ್ನು ಸೇರಿಸಲಾಗಿದೆ. 24 ಟಿಎಂಸಿ ನೀರು ಕೊಡುತ್ತೇವೆ ಎನ್ನುತ್ತಿದ್ದವರು ಇದೀಗ ಮಳೆಗಾಲದಲ್ಲಿ ಮಾತ್ರ ನೀರು ನೀಡುತ್ತೇವೆ ಎಂಬ ಹೊಸ ವರಸೆಯನ್ನು ವ್ಯವಸ್ಥಿತವಾಗಿ ಹುಟ್ಟುಹಾಕುತ್ತಿದ್ದಾರೆ.

ಒಟ್ಟಾರೆಯಾಗಿ ಎತ್ತಿನಹೊಳೆ ಯೋಜನೆಯಲ್ಲಿ ನೀರು ಹರಿಯುತ್ತದೆಯೋ ಬಿಡುತ್ತದೆಯೋ ಹಲವು ರಾಜಕಾರಣಿಗಳು ರಾಜಕಾರಣದ ಬೇಳೆಯನ್ನು ಮಾತ್ರ ಬೇಯಿಸಿಕೊಳ್ಳುತ್ತಿದ್ದಾರೆ. ಮಲೆನಾಡಿನ ಸುಂದರ ಪರಿಸರವಂರೂ ಎತ್ತಿನಹೊಳೆ ಯೋಜನೆಯಿಂದ ನಾಶವಾಗಿದ್ದು , ಕನಿಷ್ಠ ನೀರಾದರೂ ಬರಪೀಡಿತ ಪ್ರದೇಶಗಳಿಗೆ ಹರಿಯುತ್ತದೆಯೋ ಇಲ್ಲವೊ ಎಂಬುದಕ್ಕೆ ಕಾಲವೇ ಉತ್ತರ ಕೊಡಬೇಕಾಗಿದೆ.

ವೈಜ್ಞಾನಿಕ ಅಂಶಗಳನ್ನು ಮರೆಮಾಚಿ ರಾಜಕೀಯ ದೃಷ್ಟಿಯಿಂದ ಜನರ ಭಾವನೆಗಳ ಜೊತೆ ರಾಜಕಾರಣಿಗಳು ಚೆಲ್ಲಾಟವಾಡುತ್ತಿದ್ದಾರೆ. ಯೋಜನೆಯ ನಿಖರತೆಯ ಬಗ್ಗೆ ವಿಜ್ಞಾನಿಗಳ ಯಾವ ಸಂಶೋಧನೆಯನ್ನು ಜನರ ಮುಂದೆ ಇಟ್ಟಿಲ್ಲ. ಮುಗ್ಧ ಜನರಿಗೆ ಕುಡಿಯುವ ನೀರಿನ ಆಸೆ ತೋರಿಸಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ.
-ಆಂಜನೇಯ ರೆಡ್ಡಿ,ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಿಕ್ಕಬಳ್ಳಾಪುರ

* ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next