ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಲಧಾರೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಮಿನಿ ಮಲೆನಾಡಿನ ಪ್ರದೇಶಗಳೆಂದೆ ಪ್ರಖ್ಯಾತಿ ಪಡೆದಿರುವ ಏತ್ತಪೋತ ಜಲಧಾರೆ, ಮಿನಿ ಜೋಗಜಲಪಾತವೆಂದು ಕರೆಯಲಾಗುತ್ತಿರುವ ಮಾಣಿಕಪೂರ ಜಲಪಾತ ಹಾಗೂ ಬೆಟ್ಟಗುಡ್ಡಗಳ ಮಧ್ಯೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಚಂದ್ರಂಪಳ್ಳಿ ಜಲಾಶಯ ಸೌಂದರ್ಯ ಸೊಬಗನ್ನು ವಿವಿಧ ಕಡೆಗಳಿಂದ ಪ್ರವಾಸಿಗರು ರವಿವಾರ ಇಲ್ಲಿಗೆ ಆಗಮಿಸಿ ಜಲಧಾರೆಯಲ್ಲಿ ಮಿಂದೆದ್ದು ಹರ್ಷಪಟ್ಟರು.
ಗೊಟ್ಟಂಗೊಟ್ಟ ಅರಣ್ಯಪ್ರದೇಶದ ಐತಿಹಾಸಿಕ ಪುರಾತನ ಬಕ್ಕಪ್ರಭು ದೇವಸ್ಥಾನಕ್ಕೆ ತೆಲಂಗಾಣ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಬೆಟ್ಟಗುಡ್ಡಗಳ ಸುಂದರ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಆನಂದಿಸಿದರು. ಎತ್ತಪೋತ ಮತ್ತು ಮಾಣಿಕಪೂರ ಜೋಗ ಜಲಪಾತಕ್ಕೆ ಅನೇಕರು ಆಗಮಿಸಿದ ಪ್ರವಾಸಿಗರು ಬೆಟ್ಟಗುಡ್ಡಗಳ ಮೇಲಿಂದ ಹರಿಯುವ ಜಲಧಾರೆ ನೋಡಿ ಸಂಭ್ರಮಿಸಿದರು.
ಬೀದರ ಕಲಬುರಗಿ ಜಿಲ್ಲೆಗಳ ವಿವಿಧ ಇಲಾಖೆ ಅಧಿ ಕಾರಿಗಳು ಹಾಗೂ ಮಾಧ್ಯಮದವರು ರಾಜಕೀಯ ವ್ಯಕ್ತಿಗಳು, ಗಣ್ಯರು ತಮ್ಮ ಕುಟುಂಬ ಸಮೇತ ಆಗಮಿಸಿ ಜಲಧಾರೆ ಕಣ್ತುಂಬಿಕೊಂಡರು.
ಬೀದರ, ಚಿಂಚೋಳಿ, ಕೋಹಿರ, ಸಂಗಾರೆಡ್ಡಿ, ಹೈದರಾಬಾದ್, ಜಹಿರಾಬಾದ್ ಮುಂತಾದ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಅರಣ್ಯಪ್ರದೇಶದ ಸೊಬಗನ್ನು ನೋಡಿ ಆನಂದಿಸಿದರು. ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಆಗದಂತೆ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿಗಳು ಕಾಳಜಿ ವಹಿಸಿದ್ದಾರೆ.