Advertisement

ಮಳೆಗಾಲದ ಮುನ್ನೆಚ್ಚರಿಕೆ ಕೆಲಸಗಳಿಗೆ ನೀತಿಸಂಹಿತೆ ಅಡ್ಡಿ!

02:59 PM May 23, 2018 | Team Udayavani |

ನಗರ: ಮಳೆಯ ಆಗಮನ ಆಗುತ್ತಿದ್ದಂತೆ ಸಾಂಕ್ರಾಮಿಕ ಜ್ವರದ ಭೀತಿ ಕಾಣಿಸಿಕೊಂಡಿದೆ. ಇದನ್ನು ಹತ್ತಿಕ್ಕಲು ನಗರ ವ್ಯಾಪ್ತಿಯಲ್ಲಿ ಶುಚಿತ್ವದ ಕಾರ್ಯ ನಡೆಸಲು ಮುಂದಾಗಿರುವ ಪುತ್ತೂರು ನಗರಸಭೆಗೆ ಮತ್ತೆ ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿದೆ.

Advertisement

ನಗರಸಭೆ ವ್ಯಾಪ್ತಿಯ ಚರಂಡಿಗಳ ಹೂಳೆತ್ತುವಿಕೆ, ಶುಚಿ ಕೆಲಸಗಳು, ನಿಂತಿರುವ ನೀರು ಸರಾಗ ಹರಿಯುವಿಕೆಗೆ ಕೆಲಸ ನಡೆಯಲು ಟೆಂಡರ್‌ ಪ್ರಕ್ರಿಯೆ ನಡೆಯಬೇಕಾದದ್ದು ನಿಯಮ. ಆದರೆ ಜೂನ್‌ 15ರವರೆಗೆ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಈ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ, ಕರ್ತವ್ಯ ಎಂಬ ನೆಪ ಹೇಳಿ ಮಳೆಗಾಲದ ಸಿದ್ಧತೆ ನಡೆಸುವುದು ದೂರವೇ ಉಳಿದಿತ್ತು.

ಮುಂಗಾರು ಪೂರ್ವ ಮಳೆ
ಮೇ ತಿಂಗಳ ಅಂತ್ಯಕ್ಕೆ ಕರಾವಳಿ ಕರ್ನಾಟಕಕ್ಕೆ ಮುಂಗಾರು ಮಳೆ ಆಗಮಿಸುವ ನಿರೀಕ್ಷೆ ಇದೆ. ಆದರೆ ಇದಕ್ಕೆ ಮೊದಲು ಮಳೆಯ ನರ್ತನ ಶುರುವಾಗಿದೆ. ರಾತ್ರಿ ಪೂರ್ತಿ ಮಳೆ ಬರುತ್ತಿರುವುದರಿಂದ, ಅಲ್ಲಲ್ಲಿ ನೀರು ನಿಂತು ರೋಗಾಣುಗಳ ಹರಡುವಿಕೆಗೆ ಸಹಕಾರಿಯಾಗಿದೆ. ಆದ್ದರಿಂದ ರೋಗರುಜಿನಗಳ ಹಾವಳಿ ಶುರುವಾಗಿದೆ.

ಜ್ವರದ ದಾಂಗುಡಿ
ಮಳೆ ಜೋರಾಗಿ ಸುರಿದರೆ, ಸಾಂಕ್ರಾಮಿಕ ರೋಗಗಳ ಭೀತಿ ಇರುವುದಿಲ್ಲ. ಕಾರಣ ಭೂಮಿ ಮೇಲೆ ನಿಂತಿರುವ ಮಲಿನ ನೀರು ಕೊಚ್ಚಿ ಹೋಗುತ್ತದೆ. ಆದರೆ ಬಿಟ್ಟು ಬರುವ ಮಳೆ, ರೋಗಗಳ ಹರಡುವಿಕೆಗೆ ನೆರವಾಗಿದೆ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಜ್ವರ ಬೀಡುಬಿಟ್ಟಿದೆ. ಇದು ನಗರ ಪ್ರದೇಶಕ್ಕೆ ದಾಂಗುಡಿ ಇಡಲು ಹೆಚ್ಚು ಸಮಯ ಬೇಕಾಗಿಲ್ಲ. ಇದಕ್ಕೆ ಎಚ್ಚರಿಕೆ ಕ್ರಮ ವಹಿಸಬೇಕಾದ ಜವಾಬ್ದಾರಿ ನಗರಸಭೆ ಮೇಲಿದೆ.

ನಗರಸಭೆ ವ್ಯಾಪ್ತಿಯಲ್ಲಿ ಮಲಿನ ಹೆಚ್ಚು. ಇದಕ್ಕೆ ಕಾರಣ ಜನಸಂಖ್ಯೆ, ವಾಣಿಜ್ಯ ಕಾರ್ಯ ಚಟುವಟಿಕೆಗಳು. ಒಂದು ವೇಳೆ ರೋಗ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡರೂ, ದೊಡ್ಡದಾಗಿ ಪರಿಣ ಮಿಸಲು ಹೆಚ್ಚು ಸಮಯ ಬೇಡ. ಆದ್ದರಿಂದ ತಕ್ಷಣದಲ್ಲಿ ನಗರಸಭೆ ಎಚ್ಚೆತ್ತು ಕೊಳ್ಳುವ ಅಗತ್ಯವಿದೆ. ನಗರಸಭೆ ವ್ಯಾಪ್ತಿಯ ಚರಂಡಿ, ತೋಡು, ತ್ಯಾಜ್ಯ, ಡಂಪಿಂಗ್‌ ಯಾರ್ಡ್‌ಗಳನ್ನು ಶುಚಿಗೊಳಿಸಬೇಕಿದೆ. ಈ ಎಲ್ಲ ಕಾಮಗಾರಿಗಳಿಗೆ ಟೆಂಡರ್‌ ಕರೆಯುವುದು ಅಗತ್ಯ.

Advertisement

ಜಿಲ್ಲಾಧಿಕಾರಿಗೆ ಪತ್ರ
ಅಗತ್ಯ ಕಾಮಗಾರಿಗಳಿಗೆ ಟೆಂಡರ್‌ ಕರೆಯುವ ಅಗತ್ಯವಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ, ಟೆಂಡರ್‌ ಕರೆಯಲು ಜಿಲ್ಲಾಧಿಕಾರಿ ಅನುಮತಿ ಅಗತ್ಯ. ಟೆಂಡರ್‌ ಕರೆಯದೆ ನಗರ ಸಭೆ ಉದಾಸೀನ ಮಾಡಿದರೆ ರೋಗ ಭೀತಿ ಇನ್ನಷ್ಟು ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಡಿಸಿಗೆ ಪತ್ರ ಬರೆದು, ಟೆಂಡರ್‌ ಕರೆಯಲು ಅನುಮತಿ ಕೇಳಲು ನಿರ್ಧರಿಸಿದೆ.

ಚರಂಡಿ ಸಮಸ್ಯೆ
ಪುತ್ತೂರು ನಗರ ವ್ಯಾಪ್ತಿಯ ಅನೇಕ ಚರಂಡಿಗಳು ಹೂಳೆತ್ತದೇ ಬಾಕಿಯಾಗಿವೆ. ಇದರಿಂದಾಗಿ ಕೆಟ್ಟ
ವಾಸನೆ ಹರಡುತ್ತಿದ್ದು, ಆದಷ್ಟು ಶೀಘ್ರ ಕಾಮಗಾರಿ ನಡೆಸುವ ಅಗತ್ಯವಿದೆ. ಚರಂಡಿಯಲ್ಲಿ
ಕೊಳಚೆ ನೀರು ನಿಂತು, ರೋಗಾಣುಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡುತ್ತಿದೆ. ನಗರ ಠಾಣೆ ಹಿಂಭಾಗದ ಚರಂಡಿಯಲ್ಲಿ ಕೊಳಚೆ ನೀರು ನಿಂತು, ಪೊಲೀಸ್‌ ವಸತಿ ಗೃಹದಲ್ಲಿ ವಾಸ ಇರುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ .

ರೋಗ ಭೀತಿ ತಡೆಗೆ ಕ್ರಮ
ರೋಗ ಭೀತಿ ತಡೆಯುವ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಕೆಲಸ ಕಾರ್ಯಗಳನ್ನು ಮಾಡಬೇಕಿದೆ. ಮಳೆಗಾಲಕ್ಕೆ ಮೊದಲು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜಿಲ್ಲಾಧಿಕಾರಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು. ಬಳಿಕವಷ್ಟೇ ಕಾಮಗಾರಿ ನಡೆಸಲು ಸಾಧ್ಯ.
  - ಜಯಂತಿ ಬಲ್ನಾಡ್‌,
     ಅಧ್ಯಕ್ಷೆ, ಪುತ್ತೂರು ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next