ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಒಂದುಹೊತ್ತು ಊಟಕ್ಕೂ ಹೋರಾಟ ನಡೆಸುತ್ತಿದ್ದೇವೆ. ಬಿಬಿಎಂಪಿಯಿಂದ ಕೊಟ್ಟಿರುವ ಕಿಟ್ ಮೂರೇ ದಿನಕ್ಕೆ ಖಾಲಿಯಾಗಿದೆ. ಔಷಧವೂ ಇಲ್ಲ, ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. – ಇದು ರಾಜಧಾನಿಯ ಮಂಗಳಮುಖಿಯರು ಸಮಸ್ಯೆ. ಸಿಗ್ನಲ್, ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯನ್ನೇ ಬಹುತೇಕ ಮಂಗಳಮುಖಿಯರು ಜೀವನದ ದಾರಿ ಮಾಡಿ ಕೊಂಡಿದ್ದರು. ಹಾಗೆಯೇ ಇನ್ನು ಕೆಲವರು ಸ್ವ ಉದ್ಯೋಗ ಮಾಡಿಕೊಂಡಿದ್ದರು. ಕೊರೊನಾ ದಾಳಿಯಿಂದ ಇಡೀ ಮಂಗಳಮುಖಿಯರ ಸಮೂಹ ಆತಂಕಕ್ಕೆ ಸಿಲುಕಿದೆ. ನಿತ್ಯದ ಊಟಕ್ಕೂ ಪರಿತಪಿಸುವ ಸ್ಥಿತಿಗೆ ತಲುಪಿದ್ದೇವೆ.
ಮಧುಮೇಹ, ರಕ್ತದೊತ್ತಡ ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವ ಮಂಗಳಮುಖಿಯರಿಗೆ ಔಷಧ ಖರೀದಿಯೂ ಕಷ್ಟವಾಗುತ್ತಿದೆ. ಮನೆ ಬಾಡಿಗೆ ಕಟ್ಟದೇ ಇರುವುದರಿಂದ ಮನೆ ಖಾಲಿ ಮಾಡಬೇಕಾದ ಸ್ಥಿತಿಗೆ ತಲುಪಿದ್ದೇವೆ ಎಂದು ಮಂಗಳಮುಖಿಯೊಬ್ಬರು ನೋವನ್ನು ಹೇಳಿಕೊಂಡರು. ಮಂಗಳಮುಖಿಯರಲ್ಲಿ ಅನೇಕರು ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಲ್ಲಿದ್ದಾರೆ. ಕೊರೊನಾದಿಂದ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ನಮ್ಮ ವೃತ್ತಿ ಮತ್ತು ಜೀವನಕ್ಕೆ ನೇರ ಹೊಡೆತ ಬಿದ್ದಿದೆ. ಬಿಬಿಎಂಪಿಯಿಂದ ರೇಷನ್ ಕಿಟ್ ನೀಡಿದ್ದರು. ಮೂರೇ ದಿನದಲ್ಲಿ ಖಾಲಿಯಾಗಿದೆ. ಈಗ ಎರಡನೇ ಹಂತದ ಕಿಟ್ ವಿತರಣೆ ಮಾಡುವುದಾಗಿ ಹೇಳಿದ್ದಾರೆ.
ತಿಂಗಳಲ್ಲಿ ಮೂರರಿಂದ ಐದು ದಿನ ಊಟ ಮಾಡಿದರೇ ಸಾಕೇ? ರೈತರಿಗೆ, ಕೂಲಿ ಕಾರ್ಮಿಕರಿಗೆ, ಚಾಲಕರಿಗೆ ಹಾಗೂ ವಿವಿಧ ವರ್ಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಸರ್ಕಾರ ನಮ್ಮನ್ನು ಇದರಿಂದ ಹೊರಗಿಟ್ಟಿರುವುದು ಏಕೆ? ನಮಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಕನಿಷ್ಠ 6 ತಿಂಗಳ ರೇಷನ್ ಉಚಿತವಾಗಿ ನೀಡಬೇಕು ಎಂದು ಮಂಗಳ ಮುಖಿಯರ ಪರ ಹೋರಾಟ ನಡೆಸುತ್ತಿರುವ ಮಂಗಳಮುಖಿ ಸೌಮ್ಯ ವಿವರಿಸಿದರು. ಬೆಂಗಳೂರಿನಲ್ಲಿ ಐದು ಸಾವಿರಕ್ಕೂ ಅಧಿಕ ಮಂಗಳ ಮುಖಿಯರಿದ್ದಾರೆ.
ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗುವ ಸಾಧ್ಯತೆಯಿದೆ. ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಲ್ಲಿ ನಮ್ಮವರನ್ನು ಸಮಾಜ ಹೇಗೆ ಸ್ವೀಕರಿಸುತ್ತದೇ ಎಂಬುದೇ ಆತಂಕವಾಗಿದೆ. ಲಾಕ್ ಡೌನ್‌ನಿಂದ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದೇವೆ. ಸರ್ಕಾರ ನಮಗೆ ವಿಶೇಷ ಪ್ಯಾಕೇಜ್ ಒದಗಿಸಬೇಕು. ಮನೆ ಬಾಡಿಗೆ ಕಟ್ಟದೇ ಇರುವುದರಿಂದ ಮನೆ ಮಾಲೀಕರು ನಮ್ಮನ್ನು ಹೊರ ಹಾಕುವ ಹಂತಕ್ಕೆ ಬಂದಿದ್ದಾರೆ. ನಮಗೆ ಮನೆ ಬಾಡಿಗೆ ದೊರೆಯುವುದೇ ಕಷ್ಟ. ಇನ್ನು ಈ ರೀತಿಯ ಘಟನೆ ನಡೆದರೆ ಇನ್ನಷ್ಟು ಸಮಸ್ಯೆ ಎದುರಾಗಲಿದೆ. ಸರ್ಕಾರವೇ ಇದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಹಾಯಧನ ಹೆಚ್ಚಿಸಬೇಕು: ಮಂಗಳ ಮುಖಿಯರು ಯಾವಾಗಲೂ ಕಷ್ಟದಲ್ಲೇ ಇರುತ್ತಾರೆ. ಲಾಕ್‌ಡೌನ್ ನಿಂದ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ. ನಮ್ಮಲ್ಲಿರುವ ಗುರು-ಶಿಷ್ಯ ಅಥವಾ ಗುರು-ಚೇಲ ಪರಂಪರೆಯಲ್ಲಿ ಗುರುವಿಗೆ ಶಿಷ್ಯ ಕಾಣಿಕೆ ನೀಡಬೇಕು. ಈಗ ಕಾಣಿಕೆ ನೀಡುವುದು ಕಷ್ಟವಾಗಿದೆ. ನಿತ್ಯ ಭಿಕ್ಷೆ ಅಥವಾ ಲೈಂಗಿಕ ವೃತ್ತಿಯಿದ್ದಾಗ ಕಾಣಿಕೆ ನಿತ್ಯವು ಕೊಡಲು ಸಾಧ್ಯವಾಗುತಿತ್ತು. ಈಗ ಅದು ಇಲ್ಲದಾಗಿದೆ. ಅಲ್ಲದೆ, ಜೋಗತಿಯವರು ಜಾತ್ರೆ, ಹಬ್ಬ ಮೊದಲಾದ ಉತ್ಸವಗಳಲ್ಲಿ ಹಾಡಿ, ಕುಣಿದು ಅದರಿಂದ ಬರುವ ಸಂಪಾದನೆಯಿಂದ ಜೀವನ ನಡೆಸುತ್ತಿದ್ದರು. ಈಗ ಆ ದಾರಿಯು ಮುಚ್ಚಿದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾಹಿತಿ ನೀಡಿದರು.
ಸ್ವಾವಲಂಬಿಯಾಗಿ ಬೆಳೆಯಲಿ: ಕೇಂದ್ರ ಅಥವಾ ರಾಜ್ಯ ರಾಜ್ಯದ ಹಲವು ಯೋಜನೆ ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಲು ಇದು ಸಕಾಲ. ಮಂಗಳಮುಖಿಯರು ಸಾಮಾನ್ಯವಾಗಿ ಏಕಾಂಗಿಯಾಗಿ ಜೀವನ ಮಾಡುವುದಿಲ್ಲ. ಗುಂಪಾಗಿಯೇ ಇರುತ್ತಾರೆ. ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು, ಸ್ವ ಉದ್ಯೋಗದಲ್ಲಿ ಬೆಳೆಯಲು ಮಾನಸಿಕವಾಗಿ ಸದೃಢವಾಗಬೇಕು. ಅವರದ್ದೇ ಸಂಪರ್ಕ ಗುಂಪುಗಳಿವೆ, ಅವರನ್ನು ಸ್ವಾವಲಂಬಿಯಾಗಿ ಬೆಳೆಸಲು ಸರ್ಕಾರದ ಯೋಜನೆಗಳಲಿದ್ದು, ಅದರ ಸದುಪಯೋಗ ಆಗಲಿ ಎಂದು ದಕ್ಷಿಣ ಭಾರತದ ಜಿಎಫ್‌ಎಟಿಎಂ ಮಾಜಿ ಮುಖ್ಯ ಸಮಾಲೋಚಕ ಡಾ. ಸುನೀಲ್ ಕುಮಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಹಾಯಧನ 600 ರೂ. ನೀಡಲಾಗುತ್ತದೆ. ಆದರೆ, ಅದು ಸಮರ್ಪಕವಾಗಿ ತಲುಪುತ್ತಿಲ್ಲ. ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲೂ ಇರುವ ಮಂಗಳಮುಖಿಯರು, ಜೋಗತಿಗಳ ಸಮೀಕ್ಷೆ ನಡೆಸಿ, ಇಲಾಖೆಯಿಂದ ತಿಂಗಳ ಸಹಾಯಧನ ಹೆಚ್ಚಿಸುವ ಕಾರ್ಯ ಮಾಡಬೇಕು.
-ಮಂಜಮ್ಮ ಜೋಗತಿ, ಜಾನಪದ ಅಕಾಡೆಮಿ ಅಧ್ಯಕ್ಷೆ
ಲಾಕ್‌ಡೌನ್ ಅವಧಿಯಲ್ಲಿ ಅನೇಕ ಕಾರಣಕ್ಕಾಗಿ ಖನ್ನತೆಗೆ ಒಳಗಾಗಿರುತ್ತಾರೆ. ಮುಂದೆ ಏನಾಗಬಹುದು ಎಂಬ ಆತಂಕವೂ ಇರುತ್ತದೆ. ಹೀಗಾಗಿ ಸೂಕ್ತ ರೀತಿಯ ಕೌನ್ಸೆಲಿಂಗ್ ಪಡೆಯುವ ಅಗತ್ಯ ಇರುತ್ತದೆ. ಆತಂಕಕ್ಕೆ ಒಳಗಾಗುವುದಕ್ಕಿಂತ ಧೈರ್ಯ ಪಡೆದುಕೊಳ್ಳುವುದು ಅತಿಮುಖ್ಯ.
-ಡಾ.ಪ್ರವೀಣಾ, ಮನಃಶಾಸ್ತ್ರಜ್ಞೆ
* ರಾಜು ಖಾರ್ವಿ ಕೊಡೇರಿ