ಕಾಠ್ಮಂಡು: ನೇಪಾಳದ ಮುಸ್ತಾಂಗ್ ಜಿಲ್ಲೆಯ ಮನಾಪತಿ ಹಿಮಲ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ ರವಿವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮುಂಬಯಿಯ ನಾಲ್ಕು ಮಂದಿ ಸೇರಿದಂತೆ ಎಲ್ಲಾ 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮುಂಬಯಿಯ ವಿಚ್ಛೇದಿತ ದಂಪತಿ ಅಶೋಕ್ ಕುಮಾರ್, ವೈಭವಿ ಹಾಗೂ ಇಬ್ಬರು ಮಕ್ಕಳ ಪ್ರವಾಸ ದುರಂತದಲ್ಲಿ ಅಂತ್ಯಕಂಡಿದೆ.
ಒಡಿಶಾ ಮೂಲದ ಉದ್ಯಮಿ ಅಶೋಕ್ ಕುಮಾರ್ ತ್ರಿಪಾಠಿ ಹಾಗೂ ಥಾಣೆ ಮೂಲದ ಪತ್ನಿ ವೈಭವಿ ಬಾಂದೇಕರ್ ತ್ರಿಪಾಠಿ ವಿಚ್ಛೇದನಗೊಂಡಿದ್ದು, ಕೋರ್ಟ್ ಆದೇಶದ ಪ್ರಕಾರ ವರ್ಷದಲ್ಲಿ ಹತ್ತು ದಿನಗಳ ಕಾಲ ಒಟ್ಟಿಗೆ ಇರಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಅವರು ವಿಚ್ಛೇದಿತ ಪತ್ನಿ ವೈಭವಿ, ಮಕ್ಕಳಾದ ಧನುಷ್ (22ವರ್ಷ), ಮಗಳು ರಿತಿಕಾ (15ವರ್ಷ) ಜತೆ 10 ದಿನಗಳ ನೇಪಾಳ ಪ್ರವಾಸ ಕೈಗೊಂಡಿದ್ದರು.
ಆದರೆ ವಿಧಿ ವಿಪರ್ಯಾಸ ಎಂಬಂತೆ ಭಾನುವಾರ(ಮೇ 29) ನೇಪಾಳದ ಪೋಖ್ರಾದಿಂದ ವಿಮಾನ ಹೊರಟಿದ್ದು, ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಸೋಮವಾರ ವಿಮಾನ ಅಪಘಾತಕ್ಕೀಡಾಗಿದ್ದ ಪ್ರದೇಶವನ್ನು ಪತ್ತೆ ಹಚ್ಚಿ ಶೋಧ ಕಾರ್ಯ ನಡೆಸಿದಾಗ ಮುಂಬಯಿಯ ನಾಲ್ವರು ಸೇರಿದಂತೆ ಎಲ್ಲಾ 22 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿತ್ತು.
ವಿಮಾನದಲ್ಲಿ ಮುಂಬಯಿಯ ನಾಲ್ವರು, ಇಬ್ಬರು ಜರ್ಮನಿಯರು, 13 ಮಂದಿ ನೇಪಾಳದ ಪ್ರವಾಸಿಗರು ಹಾಗೂ ಮೂವರು ಸಿಬಂದಿಗಳು ಪ್ರಯಾಣಿಸುತ್ತಿದ್ದರು. ವೈಭವಿ ಬಾಂದೇಕರ್ ತ್ರಿಪಾಠಿ (51ವರ್ಷ) ಥಾಣೆಯ ಬಾಲ್ಕುಮ್ ಪ್ರದೇಶದಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.
ವೈಭವಿ ತ್ರಿಪಾಠಿ ಮುಂಬಯಿಯ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಕೋರ್ಟ್ ಆದೇಶದಂತೆ ವೈಭವಿ ಕುಟುಂಬ ಸದಸ್ಯರ ಜತೆ ಪ್ರವಾಸ ತೆರಳಲು ರಜೆ ತೆಗೆದುಕೊಂಡಿದ್ದರು. ಬಾಲ್ಕುಮ್ ನಿವಾಸದಲ್ಲಿ ವೈಭವಿಯವರ 80 ವರ್ಷದ ತಾಯಿ ಮಾತ್ರ ಇದ್ದು, ಇವರು ಅನಾರೋಗ್ಯದಲ್ಲಿರುವ ಹಿನ್ನೆಲೆಯಲ್ಲಿ ನೇಪಾಳದ ವಿಮಾನ ದುರಂತದ ಸುದ್ದಿಯನ್ನು ಈವರೆಗೂ ತಿಳಿಸಿಲ್ಲ ಎಂದು ವರದಿ ವಿವರಿಸಿದೆ. ಕುಟುಂಬ ಸದಸ್ಯರು ಕಾಠ್ಮಂಡುವಿನಿಂದ ಮುಂಬಯಿಗೆ ಪಾರ್ಥಿವ ಶರೀರ ಬರುವುದನ್ನು ಕಾಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.