Advertisement

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ: ಮನವಿ

06:16 AM Jun 15, 2020 | Lakshmi GovindaRaj |

ಬೆಂಗಳೂರು: ಸಮುದಾಯದ ಸಮಗ್ರ ಏಳಿಗೆಗಾಗಿ “ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಬಸವ ಸೇನೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ. ಕೂಡಲ ಸಂಗಮದ  ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ಬಸವ ಸೇನೆ ನಿಯೋಗ, ಈ ಸಂಬಂಧ ಮನವಿ ಸಲ್ಲಿಸಿತು.

Advertisement

ಹಿಂದುಳಿದ  ಬ್ರಾಹ್ಮಣರ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇಷ್ಟೇ ಅಲ್ಲ, ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗಾಗಿ ಈ ಹಿಂದೆಯೂ ಹಲವು ನಿಗಮಗಳನ್ನು ಸ್ಥಾಪಿಸುವ ಮೂಲಕ ಮೇಲೆತ್ತುವ ಕೆಲಸ  ಮಾಡಲಾಗುತ್ತಿದೆ. ಅದೇ ರೀತಿ, ವೀರಶೈವ ಲಿಂಗಾಯ ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಲಕ್ಷಾಂತರ ಜನ  ವೀರಶೈವ ಲಿಂಗಾಯತರು ಆರ್ಥಿಕವಾಗಿ ಸಬಲರಾಗಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಸಮುದಾಯದ ಜನ ಬಹುಸಂಖ್ಯಾತರಾಗಿದ್ದರೂ ಹಿಂದುಳಿ  ದವರಾಗಿದ್ದಾರೆ. ಎಲ್ಲ ಪಕ್ಷದ  ಶಾಸಕರುಗಳಿಗೆ ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಈಗ ಸರ್ಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಬಸವ ಜಯಂತಿಯನ್ನು ರಾಷ್ಟ್ರೀಯ  ಉತ್ಸವವಾಗಿ ಆಚರಿಸಬೇಕು. ಹಾಗೂ ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಇದೇ ವೇಳೆ ಮನವಿ ಮಾಡಲಾಯಿತು. ರಾಷ್ಟ್ರೀಯ ಬಸವ ಸೇನೆ ರಾಜ್ಯ ಘಟಕದ ಅಧ್ಯಕ್ಷ  ಶಿವನಗೌಡ ಪಾಟೀಲ್‌, ಪದಾಧಿಕಾರಿ ಭೀಮಾಶಂಕರ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next