ಧಾರವಾಡ: ಕೊರಮ ಸಮುದಾಯದ ಅಭಿವೃದ್ಧಿ ಕುರಿತಂತೆ ನಿಗಮ ಸ್ಥಾಪನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊರಮ, ಕೊರವ ಸಮಾಜ ಹಿತಾಭಿವೃದ್ಧಿ ಸಂಘದ ಆಶ್ರಯದಲ್ಲಿ ರವಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಕೊರಮ ಕಲಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಇದಲ್ಲದೇ ಸಮಾಜದ ಸಮುದಾಯದ ಭವನದ ನಿರ್ಮಾಣಕ್ಕೆ 35 ಲಕ್ಷ ರೂ. ನೀಡುವುದಾಗಿ ಸಚಿವರು ಭರವಸೆ ನೀಡಿದರು. ಬಸವಣ್ಣನ ಜೊತೆಗೆ ಉತ್ತಮ ಬಾಂಧ್ಯವ ಹೊಂದಿದ್ದ ಸಮಾಜದ ಶರಣ ನುಲಿಯ ಚಂದಯ್ಯನವರು ಕಾಯಕ ನಿಷ್ಠರಾಗಿದ್ದರು. ಕೊರವ ಸಮುದಾಯದ ಮುಂದುವರಿದ ವ್ಯಕ್ತಿಗಳು ಹಿಂದುಳಿದವರನ್ನು ಪ್ರೋತ್ಸಾಹಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕು.
ಕೊರಮ, ಕೊರವ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಮಾಜದ ಜನರು ಶಿಕ್ಷಣದ ಸೌಲಭ್ಯಗಳನ್ನು ಪಡೆದು, ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪಾಲಿಕೆಯ ಉಪ ಮೇಯರ್ ಲಕ್ಷ್ಮೀಬಾಯಿ ಬಿಜವಾಡ ಮಾತನಾಡಿ, ಕೊರಮ, ಕೊರವ ಸಮುದಾಯ ತುಂಬಾ ದೊಡ್ಡದಾಗಿದೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೊರಮ ಸಮಾಜದ ಜನರು ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಹನುಮಂತ ಕೊರವರ, ಸಿದ್ದಲಿಂಗೇಶ ರಂಗಣ್ಣವರ, ಶಂಕರಣ್ಣ ಬಿಜವಾಡ, ಯಮನೂರ ಗುಡಿಹಾಳ, ಬಸವರಾಜ ಭಜಂತ್ರಿ, ಬಾಬು ಕಲಕೇರಿ, ರವಿ ಭಜಂತ್ರಿ, ಹನುಮಂತ ಮೊರಬದ, ಗೋವಿಂದ ಭಜಂತ್ರಿ, ಶಂಕರ ತಳವಾರ ಇದ್ದರು.