Advertisement

ನಿರುದ್ಯೋಗ ನಿವಾರಣೆಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ

08:46 PM Aug 25, 2022 | Shwetha M |

ಹೂವಿನಹಿಪ್ಪರಗಿ: ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಈ ಭಾಗದ ಯುವಕರನ್ನು ಉದ್ಯೋಗಸ್ಥರನ್ನಾಗಿ ಮಾಡುವ ನಿಟ್ಟಿನಲ್ಲಿ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ ಉದ್ಯೋಗಸ್ಥರನ್ನಾಗಿ ಮಾಡುವ ಭರವಸೆಯನ್ನು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ನೀಡಿದರು.

Advertisement

ಬಸವನಬಾಗೇವಾಡಿ ತಾಲೂಕಿನ ರೆಬಿನಾಳ ಗ್ರಾಮದಲ್ಲಿ 2019-20ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮದಡಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಈಗಾಗಲೆ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನವನ್ನು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಜಿಯವರ ಕನಸಿನಂತೆ ಗ್ರಾಮೀಣ ಪ್ರದೇಶದ ಜನರು ಶುದ್ಧ ನೀರನ್ನು ಕುಡಿಯುವಂತಾಗಲು ಜಲ ಜೀವನ ಮಿಷನ್‌ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ನಳ ಜೋಡಣೆ ಮಾಡಿ ಶುದ್ಧ ನೀರು ಒದಗಿಸಲಾಗಿದೆ ಎಂದು ಹೇಳಿದರು.

ಇಂಗಳೇಶ್ವರ ಗ್ರಾಮದಿಂದ ರೆಬಿನಾಳ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ 5 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಕೈಗೊಳ್ಳಲಾಗುವುದು. ರೈತಾಪಿ ಜನಗಳ ಹಿತ ಕಾಯುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ವಿಜಯಪುರ 203 ಕಿ.ಮೀ. ಹಾಗೂ ಚಿಮ್ಮಲಗಿ 176 ಕಿ.ಮೀ. ಮುಖ್ಯ ಕಾಲುವೆಗೆ ಉಪ ಕಾಲುವೆ ನಿರ್ಮಾಣಕ್ಕೆ 680 ಕೋಟಿ ರೂ. ಮಂಜೂರಿಗಾಗಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಜೂರಾತಿ ದೊರೆತು ಯೋಜನೆ ಪೂರ್ಣಗೊಂಡಲ್ಲಿ ಜಿಲ್ಲೆಯ 1.25 ಲಕ್ಷ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ ಎಂದರು.

ಜನತೆಯ ಸಹಕಾರದಿಂದ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಮತ್ತು ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ಉಳಿದ ದಿನಗಳಲ್ಲಿ ನಾವೆಲ್ಲರೂ ಒಂದೇ ಆಗಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಶ್ರಮಿಸೋಣ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕು ಸಾಗಿಸುವಂತಾಗಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

Advertisement

ಗ್ರಾಮದ ಮುಖಂಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ಶಾಸಕರು ಪ್ರತಿ ಗ್ರಾಮಗಳಿಗೂ ತೆರಳಿ ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೊಳ್ಳುತ್ತ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಭಿವೃದ್ಧಿ ಹರಿಕಾರರಾದ ಶಾಸಕರ ಕೈ ಬಲ ಪಡಿಸಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವನಬಾಗೇವಾಡಿ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಹಿರೇಮಠ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಗ್ರಾಪಂ ಸದಸ್ಯ ಯಲ್ಲಪ್ಪ ಮಾದರ, ಮುಖಂಡರಾದ ಶರಣಗೌಡ ಬಿರಾದಾರ, ಚಿದಾನಂದ ಹಚ್ಯಾಳ, ಮಹಾಂತೇಶ ಮನಗೂಳಿ, ಚಂದ್ರಶೇಖರ ಮೇಲಿನಮನಿ, ಭೂ ಸೇನಾ ನಿಗಮದ ಎಇಇ ಆನಂದಸ್ವಾಮಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next