ವೀರೇಶ ಮಡ್ಲೂರ
ಹಾವೇರಿ: ಕೊರೊನಾ ಮಹಾಮಾರಿ ಸಂಕಷ್ಟದ ದಿನಗಳ ನಡುವೆಯೂ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಮಹಾತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸುವ ಮೂಲಕ ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದಂತಾಗಿದೆ.
ತಾಲೂಕಿನ ಜಂಗಮನಕೊಪ್ಪ ಬಳಿ ಇರುವ ಹಾಲು ಶೀತಲೀಕರಣ ಘಟಕದ ಬಳಿಯೇ ಮೆಗಾ ಡೇರಿ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದ್ದು, ಇಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕವನ್ನು 90 ಕೋಟಿ ವೆಚ್ಚದಲ್ಲಿ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಾಲಿನಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಯಿಂದ ಪೂರೈಕೆಯಾಗುತ್ತಿದೆ. ಅದಕ್ಕಾಗಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಕಳೆದ ವರ್ಷ ಜಿಲ್ಲೆಗೆ ಆಗಮಿಸಿದ್ದ ವೇಳೆ ಸಿಎಂ ಯಡಿಯೂರಪ್ಪನವರು ಮೆಗಾ ಡೇರಿ ಸ್ಥಾಪನೆಯ ಭರವಸೆ ನೀಡಿದ್ದರು.
ಜಿಲ್ಲೆಯಲ್ಲಿ ಸಂಗ್ರಹವಾಗುವ ಹಾಲಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಒದಗಿಸುವುದು, ಹಾಲಿನ ಶೀತಲೀಕರಣ ಘಟಕ, ಹಾಲಿನ ಉಪ ಉತ್ಪನ್ನಗಳ ತಯಾರಿಕೆಗೆ ಅಗತ್ಯ ಮೂಲ ಸೌಲಭ್ಯ ಮಾಡಿಕೊಳ್ಳಲು ಕನಿಷ್ಟ 90 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಿ ಸರ್ಕಾರಕ್ಕೆ ಸಾಧ್ಯತಾ ವರದಿ ಸಲ್ಲಿಸಲಾಗಿತ್ತು.
22 ಸಾವಿರ ಹಾಲು ಉತ್ಪಾದಕರು: ಧಾರವಾಡ ಹಾಲು ಒಕ್ಕೂಟ ಮಹಾಮಂಡಳಿ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿದೆ. ಈ ಜಿಲ್ಲೆಗಳಲ್ಲಿ ಒಟ್ಟು 45000 ಹಾಲು ಉತ್ಪಾದಕ ಸದಸ್ಯರಿದ್ದಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿ 22,000 ಹಾಲು ಉತ್ಪಾದಕರಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಶೇ.20ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆ ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಅಲ್ಟ್ರಾ ಹೀಟ್ ಟ್ರೀಟ್ಮೆಂಟ್ ಪ್ಯಾಕಿಂಗ್ ಘಟಕದ ಮಹಾತ್ವಾಕಾಂಕ್ಷಿ ಯೋಜನೆ ಸಿದ್ಧಪಡಿಸಲಾಗಿತ್ತು. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಿಲ್ಲೆಯಲ್ಲಿ ಅನಿಷ್ಠಾನಗೊಳಿಸುವಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಎಲ್ಲ ಶಾಸಕರು ಮಹತ್ವದ ಪಾತ್ರ ವಹಿಸಿದ್ದು, ಕೊರೊನಾ ಸಂಕಷ್ಟದ ದಿನಗಳ ಮಧ್ಯೆಯೂ ಮೆಗಾ ಡೇರಿ ಯೋಜನೆಗೆ ಅನುಮತಿ ಕೊಡಿಸಲು ಶ್ರಮಿಸಿದ್ದಕ್ಕೆ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೆಚ್ಚಿದ ಹಾಲಿನ ಉತ್ಪಾದನೆ: ಧಾರವಾಡ ಒಕ್ಕೂಟದ ವ್ಯಾಪ್ತಿಯಲ್ಲಿರುವ ನಾಲ್ಕು ಜಿಲ್ಲೆಗಳಿಂದ ಪ್ರತಿನಿತ್ಯ 2.42 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಆ ಪೈಕಿ ಹಾವೇರಿ ಜಿಲ್ಲೆಯಲ್ಲಿಯೇ 1.12 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಉತ್ಪಾದನೆ ಆಗುತ್ತಿದ್ದರೂ ಮೂಲ ಸೌಕರ್ಯದ ಕೊರತೆಯಿಂದ ಧಾರವಾಡಕ್ಕೆ ಸಾಗಿಸಿ ಅಲ್ಲಿ ಸಂಸ್ಕರಣೆ ಮಾಡುವ ಅನಿವಾರ್ಯತೆ ಇತ್ತು. ಆದರೆ ಈಗ ಜಿಲ್ಲೆಯಲ್ಲಿಯೇ ಮೆಗಾ ಡೇರಿ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಸಿಗುವ ಹಾಲನ್ನು ಸ್ಥಳೀಯವಾಗಿಯೇ ಸಂಸ್ಕರಿಸಿ ಮಾರುಕಟ್ಟೆಗೆ ಬಿಡಬಹುದಾಗಿದೆ. ಅಲ್ಲದೇ, ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತದೆ. ಇದರ ಜತೆಗೆ ಸರ್ಕಾರದ ಪ್ರೋತ್ಸಾಹ ಧನವೂ ಜಿಲ್ಲೆಯ ರೈತರಿಗೆ ಹೆಚ್ಚು ದೊರಕುವ ಮೂಲಕ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ.